ಕೊಲೆಯಾದ ಅರ್ಜೂ ಸಿಂಗ್ ಚೌಹ್ವಾಣ್
ನವದೆಹಲಿ: ಪ್ರೀತಿ ಮಾಡುತ್ತಿದ್ದ ಹುಡುಗಿಯನ್ನು ಕೊಲೆ ಮಾಡಿ, ಮೃತದೇಹದೊಂದಿಗೆ ಐದು ದಿನಗಳ ಕಾಲ ಕಳೆದ ಯುವಕ ಮತ್ತೊಬ್ಬಳನ್ನು ವಿವಾಹವಾಗಿರುವ ಘಟನೆ ದೆಹಲಿಯಲ್ಲಿ ನಡೆದಿದೆ.
ದೆಹಲಿ ವಿಶ್ವವಿದ್ಯಾಲಯದಲ್ಲಿ ವ್ಯಾಸಂಗ ಮಾಡುತ್ತಿದ್ದ ಅರ್ಜೂ ಸಿಂಗ್ ಚೌಹ್ವಾಣ್ (21) ಮೃತಪಟ್ಟ ವಿದ್ಯಾರ್ಥಿನಿ. ಅರ್ಜು ಸಿಂಗ್ ಚೌಹ್ವಾಣ್ ಮತ್ತು ನವೀನ್ ಖಾತ್ರಿ ಇಬ್ಬರೂ ಪರಸ್ಪರ ಪ್ರೀತಿಸುತ್ತಿದ್ದರು. ಮದುವೆಯಾಗಲು ಇಚ್ಛಿಸಿ ಪೋಷಕರಿಗೆ ವಿಷಯ ತಿಳಿಸಿದ್ದರು. ಆದರೆ ಪೋಷಕರಿಂದ ಮದುವೆಗೆ ವಿರೋಧ ವ್ಯಕ್ತವಾಗಿತ್ತು.
ಮತ್ತೆ ಇಬ್ಬರು ಭೇಟಿಯಾಗದಂತೆ ಎಚ್ಚರಿಸಿದ್ದಾರೆ. ಒಂದು ದಿನ ಮಗಳು ಮನೆಗೆ ಬರದಿದ್ದಾಗ ಗಾಬರಿಗೊಂಡ ಪೋಷಕರು, ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ. ಪೊಲೀಸರು ನವೀನನ್ನು ವಶಕ್ಕೆ ಪಡೆದು ವಿಚಾರಣೆ ನಡೆಸಿದಾಗ ಸತ್ಯ ಬಾಯ್ಬಿಟ್ಟಿದ್ದಾನೆ. ತಾನೇ ಅರ್ಜೂ ಸಿಂಗ್ ನ ಕತ್ತು ಹಿಸುಕಿ ಕೊಂದಿದ್ದೇನೆ ಎಂದು ತಿಳಿಸಿದ್ದಾನೆ.
ಆಕೆಯ ದೇಹವನ್ನು ಮನೆಯೊಳಗೆ ಹೂತ್ತಿಟ್ಟಿರುವುದಾಗಿ ತಿಳಿಸಿದ್ದಾನೆ. ಐದು ದಿನಗಳ ಕಾಲ ಆಕೆಯ ದೇಹವನ್ನು ಮನೆಯಲ್ಲಿ ಇಟ್ಟುಕೊಂಡಿದ್ದ ನವೀನ್ ಫೆಬ್ರವರಿ 4ರಂದು ಮತ್ತೊಬ್ಬ ಯುವತಿಯನ್ನು ಮದುವೆಯಾಗಿದ್ದಾನೆ.
ಪ್ರಕರಣ ದಾಖಲಿಸಿಕೊಂಡಿರುವ ಪೊಲೀಸರು ಮತ್ತಷ್ಟು ತನಿಖೆ ಕೈಗೊಂಡಿದ್ದಾರೆ. ಈ ಕೃತ್ಯದಲ್ಲಿ ನವೀನ್ ತಂದೆ ಪಾತ್ರವಿದ್ದು, ತಂದೆಯ ಬಂಧನಕ್ಕೆ ಪೊಲೀಸರು ಬಲೆ ಬೀಸಿದ್ದಾರೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics