ನವದೆಹಲಿ: ಪವಾಡ ಸದೃಶವಾಗಿ ಬದುಕುಳಿದಿರುವ ಕರ್ನಾಟಕದ ಹನುಮಂತಪ್ಪ ಕೊಪ್ಪದ ಅವರನ್ನು ನೋಡಲು ಪ್ರಧಾನಿ ನರೇಂದ್ರ ಮೋದಿ ಅವರು ದೆಹಲಿಯಲ್ಲಿರುವ ಆಸ್ಪತ್ರೆಗೆ ಭೇಟಿ ನೀಡಿದ್ದಾರೆ.
ದೆಹಲಿಯ ಆರ್ ಆರ್ ಆಸ್ಪತ್ರೆಯಲ್ಲಿ ತುರ್ತು ನಿಗಾ ಘಟಕದಲ್ಲಿ ಚಿಕಿತ್ಸೆ ಪಡೆಯುತ್ತಿರುವ ಹನುಮಂತಪ್ಪ ಕೊಪ್ಪದ್ ಅವರನ್ನು ನೋಡಲು ಪ್ರಧಾನಿ ತೆರಳಿದ್ದು, ಅಸ್ವಸ್ಥ ಕೊಪ್ಪದ ಆರೋಗ್ಯದ ಬಗ್ಗೆ ವಿಚಾರಿಸಿದ್ದಾರೆ.
ಇದಕ್ಕೂ ಮುನ್ನ ಟ್ವೀಟ್ ಮಾಡಿರುವ ಮೋದಿ, ಹನುಮಂತಪ್ಪ ಕೊಪ್ಪದ ಅವರ ಆರೋಗ್ಯ ಸುಧಾರಿಸಲಿ ಎಂಬ ಇಡೀ ದೇಶದ ಪ್ರಾರ್ಥನೆಯೊಂದಿಗೆ ಅವರನ್ನು ಕಾಣಲು ಆಸ್ಪತ್ರೆಗೆ ತೆರಳುತ್ತಿದ್ದೇನೆ ಎಂದು ತಿಳಿಸಿದ್ದರು.
ದೆಹಲಿಯ ಕಂಟೋನ್ಮೆಂಟ್ ನಲ್ಲಿರುವ ಆರ್ ಆರ್ ಆಸ್ಪತ್ರೆಯಲ್ಲಿ ವಿಶೇಷ ವೈದ್ಯರ ತಂಡ ಹನುಮಂತಪ್ಪ ಕೊಪ್ಪದ ಅವರಿಗೆ ಚಿಕಿತ್ಸೆ ನೀಡುತ್ತಿದ್ದು, ಆರೋಗ್ಯದ ಸ್ಥಿತಿ ಸ್ಥಿರವಾಗಿದೆ ಎಂದು ತಿಳಿಸಿದ್ದಾರೆ.
ಜಮ್ಮು ಮತ್ತು ಕಾಶ್ಮೀರದ ಸಿಯಾಚಿನ್ ನಲ್ಲಿ ಫೆಬ್ರವರಿ 3ರಂದು ಸಂಭವಿಸಿದ ಹಿಮಪಾತದಲ್ಲಿ ಭಾರತದ 10 ಯೋಧರು ಮೃತಪಟ್ಟಿದ್ದಾರೆ ಎಂದು ಕೇಂದ್ರ ಸರ್ಕಾರ ಪ್ರಕಟಿಸಿತ್ತು. ಆದರೆ, 6 ದಿನಗಳ ಬಳಿಕ ಅಸ್ವಸ್ಥ ಸ್ಥಿತಿಯಲ್ಲಿ ಹನುಮಂತಪ್ಪ ಕೊಪ್ಪದ ಪತ್ತೆಯಾಗಿದ್ದಾರೆ. ಹನುಮಂತಪ್ಪ ಕೊಪ್ಪದ ಕರ್ನಾಟಕದ ಧಾರವಾಡ ಜಿಲ್ಲೆಯ ಕುಂದಗೋಳ ತಾಲೂಕಿನ ಬೆಟದೂರಿನ ನಿವಾಸಿ.