ನವದೆಹಲಿ: ಸಂಸತ್ ದಾಳಿಯ ರೂವಾರಿ ಅಫ್ಜಲ್ ಗುರುವನ್ನು ಗಲ್ಲಿಗೇರಿಸಿದ್ದನ್ನು ಖಂಡಿಸಿ ಜವಾಹರ್‍ಲಾಲ್ ನೆಹರೂ ವಿಶ್ವವಿದ್ಯಾಲಯ(ಜೆಎನ್‍ಯು)ದ ಕೆಲವು ವಿದ್ಯಾರ್ಥಿಗಳು ದೇಶ ವಿರೋಧಿ ಘೋಷಣೆ ಕೂಗಿದ ಪ್ರಕರಣಕ್ಕೆ ಸಂಬಂಧಿಸಿದಂತೆ ಜೆಎನ್ ಯು ವಿದ್ಯಾರ್ಥಿ ಸಂಘದ ಅಧ್ಯಕ್ಷನ ಬಂಧನವನ್ನು ಶುಕ್ರವಾರ ಎಡರಂಗ ಪ್ರಶ್ನಿಸಿದೆ.
ಜೆಎನ್ ಯು ವಿದ್ಯಾರ್ಥಿ ಸಂಘದ ಅಧ್ಯಕ್ಷ ಕನ್ಹಯ್ಯ ಕುಮಾರ್ ಅವರನ್ನು ಬಂಧಿಸುವ ಮೂಲಕ ಕೇಂದ್ರ ಸರ್ಕಾರ ಬಿಬಿವಿಪಿಗೆ ಎಡರಂಗ ಟಾರ್ಗೆಟ್ ಮಾಡಲು ಪರೋಕ್ಷ ಸಮ್ಮತಿ ಸೂಚಿಸಿದೆ ಮತ್ತು ಈ ಸಂಬಂಧ ಎಬಿವಿಪಿ ವಿರುದ್ಧ ಯಾವುದೇ ಕ್ರಮ ತೆಗೆದುಕೊಳ್ಳದಂತೆ ದೆಹಲಿ ಪೊಲೀಸರಿಗೆ ಸೂಚಿಸಿದೆ ಎಂದು ಎಡರಂಗ ಆರೋಪಿಸಿದೆ. ಅಲ್ಲದೆ ಈಗ ಜೆಎನ್ ಯುನಲ್ಲಿ ನಡೆಯುತ್ತಿರುವ ಬೆಳವಣೆಯನ್ನು ತುರ್ತು ಪರಿಸ್ಥಿತಿಗೆ ಹೋಲಿಸಿದೆ.
ದೇಶ ವಿರೋಧಿ ಘೋಷಣೆ ಪ್ರಕರಣವನ್ನು ಖಂಡಿಸಿರುವ ಕಮ್ಯೂನಿಸ್ಟ್ ಪಕ್ಷಗಳು, ಕಾನೂನು ಪ್ರಕಾರ ದುಷ್ಕರ್ಮಿಗಳ ವಿರುದ್ಧ ಕ್ರಮ ತೆಗೆದುಕೊಳ್ಳಿ. ಆದರೆ ಈ ಸಂಬಂಧ ಎಡರಂಗದ ವಿದ್ಯಾರ್ಥಿ ಸಂಘಟನೆಯ ಸದಸ್ಯರನ್ನು ಟಾರ್ಗೆಟ್ ಮಾಡಬೇಡಿ ಎಂದು ಒತ್ತಾಯಿಸಿವೆ.
ಒಂದು ರಾಜಕೀಯ ಪಕ್ಷವಾಗಿ ದೇಶ ವಿರೋಧಿ ಕೃತ್ಯಗಳನ್ನು ನಾವು ಖಂಡಿಸುತ್ತೇವೆ. ಕಾನೂನು ಪ್ರಕಾರ ಅಂತವರ ವಿರುದ್ಧ ಕ್ರಮ ತೆಗೆದುಕೊಳ್ಳಿ. ಆದರೆ ಕ್ರಮದ ಹೆಸರಿನಲ್ಲಿ ಎಡರಂಗದ ವಿದ್ಯಾರ್ಥಿ ಸಂಘಟನೆಗಳನ್ನು ಟಾರ್ಗೆಟ್ ಮಾಡುವುದು ಸರಿಯಲ್ಲ ಎಂದು ಸಿಪಿಐ ರಾಷ್ಟ್ರೀಯ ಕಾರ್ಯದರ್ಶಿ ಡಿ.ರಾಜ ಅವರು ಹೇಳಿದ್ದಾರೆ.
ಜೆಎನ್ ಯು ಘಟನೆ ಸಂಬಂಧ ಕೆಲವು ಅಪರಿಚಿತರ ವಿರುದ್ಧ ದೇಶದ್ರೋಹದ ಕೇಸ್ ದಾಖಲಿಸಿದ್ದ ದೆಹಲಿ ಪೊಲೀಸರು, ಇಂದು ಜೆಎನ್ ಯು ಕ್ಯಾಂಪಸ್ ನಲ್ಲಿರುವ ವಸತಿ ನಿಲಯದಲ್ಲಿ ಜೆಎನ್ ಯು ವಿದ್ಯಾರ್ಥಿ ಸಂಘದ ಅಧ್ಯಕ್ಷ ಕನ್ಹಯ್ಯ ಕುಮಾರ್ ಅವರನ್ನು ಬಂಧಿಸಿದ್ದರು.
ಸಂಸತ್ ಮೇಲೆ ದಾಳಿ ನಡೆಸಿದ ಆರೋಪಿ ಅಫ್ಜಲ್ ಗುರು ಗಲ್ಲಿಗೇರಿಸಿದ್ದನ್ನು ಖಂಡಿಸಿ, ವಿದ್ಯಾರ್ಥಿಗಳ ಗುಂಪೊಂದು ಕಾರ್ಯಕ್ರಮವೊಂದನ್ನು ಆಯೋಜಿಸಿತ್ತು. ಕಾರ್ಯಕ್ರಮದಲ್ಲಿ ಭಾರತ ವಿರೋಧಿ ಘೋಷಣೆಗಳನ್ನು ಕೂಗಲಾಗಿತ್ತು.