ದೇಶ

ಎನ್ ಐಎಗೆ ಜೆಎನ್ ಯು ತನಿಖೆ ಜವಾಬ್ದಾರಿ ಕೋರಿ ಸಲ್ಲಿಸಿದ್ದ ಅರ್ಜಿ ವಜಾ

Srinivasamurthy VN

ನವದೆಹಲಿ: ಜವಾಹರ್ ಲಾಲ್ ನೆಹರು ವಿಶ್ವವಿದ್ಯಾಲಯದಲ್ಲಿ ನಡೆದ ಘರ್ಷಣೆ ಪ್ರಕರಣದ ತನಿಖೆಯ ಜವಾಬ್ದಾರಿಯನ್ನು ರಾಷ್ಟ್ರೀಯ ತನಿಖಾ ದಳಕ್ಕೆ ವಹಿಸಬೇಕು ಎಂದು ಕೋರಿ ಸಲ್ಲಿಸಿದ್ದ  ಅರ್ಜಿಯನ್ನು ದೆಹಲಿ ಹೈಕೋರ್ಟ್ ಮಂಗಳವಾರ ವಜಾಗೊಳಿಸಿದೆ.

ರಂಜನ್ ಅಗ್ನಿಹೋತ್ರಿ ಅವರು ಸಲ್ಲಿಸಿದ್ದ ರಿಟ್ ಅರ್ಜಿಯ ವಿಚಾರಣೆಯನ್ನು ಇಂದು ಕೈಗೆತ್ತಿಕೊಂಡ ನ್ಯಾಯಮೂರ್ತಿ ಮನಮೋಹನ್ ಅವರ ಪೀಠ ಅರ್ಜಿಯನ್ನು ಅಕಾಲಿಕ ಎಂದು ಪರಿಗಣಿಸಿ  ವಜಾಗೊಳಿಸಿದೆ. "ಫೆಬ್ರವರಿ 9ರಂದು ನಡೆದಿದ್ದ ಘಟನೆ ಸಂಬಂಧ ಈಗಾಗಲೇ ದೆಹಲಿ ಪೊಲೀಸರು ತನಿಖೆ ನಡೆಸುತ್ತಿದ್ದಾರೆ. ತೀರಾ ಅನಿವಾರ್ಯವಾಗದ ಹೊರತು ಪ್ರಕರಣದ ತನಿಖೆಯಲ್ಲಿ ನ್ಯಾಯಾಲಯ ಮಧ್ಯ ಪ್ರವೇಶ ಮಾಡುವುದಿಲ್ಲ ಎಂದು ನ್ಯಾಯಮೂರ್ತಿ ಮನಮೋಹನ್ ಹೇಳಿದ್ದಾರೆ.

ಇದಕ್ಕೂ ಮೊದಲು ರಿಟ್ ಅರ್ಜಿ ಸಲ್ಲಿಸಿದ್ದ ಅರ್ಜಿದಾರ ರಂಜನ್ ಅಗ್ನಿಹೋತ್ರಿ ಅವರು ತಮ್ಮ ವಾದ ಮಂಡಿಸುತ್ತಾ, ಇದೊಂದು ಗಂಭೀರ ಮತ್ತು ಸೂಕ್ಷ್ಮ ಪ್ರಕರಣವಾಗಿದೆ. ಜವಾಹರ ಲಾಲ್  ವಿಶ್ವವಿದ್ಯಾಲಯದ ಆವರಣದಲ್ಲಿ ದೇಶ ದ್ರೋಹಿ ಘೋಷಣೆಗಳನ್ನು ಕೂಗಲಾಗಿದೆ ಎಂದು ಹೇಳಿದರು. ಇದಕ್ಕೆ ಬೆಂಬಲ ಸೂಚಿಸಿದ ಅಗ್ನಿಹೋತ್ರಿ ಅವರ ಪರ ವಕೀಲ ಹರಿ ಶಂಕರ್ ಅವರು, ಕೆಲ  ವಿದ್ಯಾರ್ಥಿಗಳಿಂದ ದೇಶದ ಸಾರ್ವಭೌಮತ್ವ ಮತ್ತು ಸಮಗ್ರತೆಗೆ ಧಕ್ಕೆಯಾಗಿದೆ. ವಿವಿಗೆ ಸಂಬಂಧಿಸಿದ ಕೆಲ ವ್ಯಕ್ತಿಗಳು ಪ್ರಕರಣದ ಹಿಂದಿದ್ದು, ಪ್ರಕರಣದ ತನಿಖೆಯ ಜವಾಬ್ದಾರಿಯನ್ನು ರಾಷ್ಟ್ರೀಯ  ತನಿಖಾ ದಳಕ್ಕೆ ವಹಿಸಬೇಕು ಎಂದು ಮನವಿ ಮಾಡಿಕೊಂಡರು.

ಇದಕ್ಕೆ ಉತ್ತರಿಸಿದ ನ್ಯಾಯಾಲಯ, ನಾವೇನು ರಾಜಕಾರಣಿಗಳಲ್ಲ. ಪ್ರಕರಣದ ತನಿಖೆ ಪ್ರಗತಿಯಲ್ಲಿದ್ದು, ಕಾನೂನು ಮತ್ತು ಪೊಲೀಸರು ಇದರ ಮೇಲ್ವಿಚಾರಣೆ ನೋಡುತ್ತಿದ್ದಾರೆ ಎಂದು ಹೇಳಿತು.

SCROLL FOR NEXT