ದೇಶ

ನನ್ನ ಹಿಂದಿನ ಜೀವನವನ್ನು ಮಗನ ಭವಿಷ್ಯದೊಂದಿಗೆ ತಾಳೆ ಮಾಡಬೇಡಿ

Srinivasamurthy VN

ನವದೆಹಲಿ: ನನ್ನ ಹಿಂದಿನ ಜೀವನವನ್ನು ನನ್ನ ಮಗ ಉಮರ್ ಖಲೀದ್ ಭವಿಷ್ಯದೊಂದಿಗೆ ತಾಳೆ ಹಾಕಬೇಡಿ ಎಂದು ಜೆಎನ್ ಯು ವಿವಾದ ಪ್ರಕರಣದ ಪ್ರಮುಖ ಆರೋಪಿಯಾಗಿರುವ ಉಮರ್  ಖಲೀದ್ ತಂದೆ ಸೈಯದ್ ಖಾಸಿಂ ಇಲ್ಯಾಸ್ ಅವರು ಹೇಳಿದ್ದಾರೆ.

ದೆಹಲಿಯಲ್ಲಿ ಮಾತನಾಡಿದ ಅವರು, ನನ್ನ ಮಗ ಮುಸ್ಲಿಂ ಆದ ಕಾರಣದಿಂದಲೇ ಆತನನ್ನು ಗುರಿಯಾಗಿಸಿಕೊಳ್ಳಲಾಗುತ್ತಿದೆ. ಈಗಲೂ ಮಗ ಎಲ್ಲಿದ್ದಾನೆ ಎಂದು ನನಗೆ ತಿಳಿದಿಲ್ಲ. ಕೂಡಲೇ ಆತ  ಬಂದು ಪೊಲೀಸರಿಗೆ ಶರಣಾಗುವಂತೆ ಮತ್ತು ನ್ಯಾಯಾಲಯದ ವಿಚಾರಣೆ ಎದುರಿಸುವಂತೆ ಹೇಳುತ್ತೇನೆ. ಆದರೆ ಆತ ಶರಣಾದರೆ ಆತನಿಗೆ ಸೂಕ್ತ ಭದ್ರತೆ ಇದೆಯೇ ಎಂಬುದು ಪ್ರಶ್ನೆಯಾಗಿದೆ.  ಸರ್ಕಾರ ಸೂಕ್ತ ರೀತಿಯಲ್ಲಿ ಭದ್ರತೆ ಒದಗಿಸಿದರೆ ಖಂಡಿತ ಆತ ಶರಣಾಗುತ್ತಾನೆ ಎಂದು ಸೈಯದ್ ಖಾಸಿಂ ಅವರು ಹೇಳಿದ್ದಾರೆ.

ಇದೇ ವೇಳೆ ಜೆಎನ್ ಯು ವಿವಾದಕ್ಕೆ ಸಂಬಂಧಿಸಿದಂತೆ ಮಾತನಾಡಿದ ಖಾಸಿಂ ಅವರು, ನ್ಯಾಯಾಲಯ ಪ್ರಕರಣವನ್ನು ಸೂಕ್ತ ರೀತಿಯಲ್ಲಿ ವಿಚಾರಣೆ ನಡೆಸಬೇಕು ಮತ್ತು ಮಾಧ್ಯಮಗಳನ್ನು  ವಿಚಾರಣೆಯಿಂದ ದೂರವಿಡಬೇಕು ಎಂದು ಹೇಳಿದರು. ಇನ್ನು ತಮ್ಮ ಮಗನಿಗೆ ಉಗ್ರ ಸಂಘಟನೆಗಳೊಂದಿಗೆ ಸಂಪರ್ಕ ಇದೆ ಎನ್ನುವ ಆರೋಪದ ಕುರಿತು ಕೇಳಿದ ಪ್ರಶ್ನೆಗೆ ಉತ್ತರಿಸಿದ  ಖಾಸಿಂ ಅವರು, ನಾನು ಈ ಹಿಂದೆ ಸಿಮಿ ಸಂಘಟನೆಯಲ್ಲಿ ಕೆಲಸ ಮಾಡಿದ್ದರಿಂದ ನನ್ನ ಮಗನಿಗೂ ಅದರ ನಂಟನ್ನು ವಿನಾಕಾರಣ ಕಟ್ಟಲಾಗುತ್ತಿದೆ. ನಾನು 1985ರಲ್ಲಿಯೇ ಸಂಘಟನೆಯಿಂದ  ನಿವೃತ್ತಿಯಾಗಿದ್ದೆ. ನಾನು ನಿವೃತ್ತಿಯಾದ ಬಳಿಕ ಉಮರ್ ಜನಿಸಿದ್ದು. ಆದರೆ ಮಾಧ್ಯಮಗಳಲ್ಲಿ ಉಮರ್ ನನ್ನು ಉಗ್ರವಾದಿ ಎಂಬಂತೆ ಬಿಂಬಿಸಲಾಗುತ್ತಿದೆ. ಹೀಗಾಗಿ ನನ್ನ ಹಿಂದಿನ ಜೀವನದಿಂದ  ನನ್ನ ಮಗನ ಭವಿಷ್ಯವನ್ನು ಅಳೆಯಬೇಡಿ ಎಂದು ಖಾಸಿಂ ಮನವಿ ಮಾಡಿದ್ದಾರೆ.

ಪಾಕಿಸ್ತಾನ ಮೂಲದ ಉಗ್ರ ಸಂಘಟನೆಗಳೊಂದಿಗೆ ಉಮರ್ ಗೆ ಸಂಪರ್ಕವಿದೆ ಎಂಬ ಆರೋಪವನ್ನು ತಳ್ಳಿಹಾಕಿರುವ ಖಾಸಿಂ ಅವರು, ನನ್ನ ಕುಟುಂಬದ ಪ್ರತಿಯೊಬ್ಬರಿಗೂ ಪಾಸ್ ಪೋರ್ಟ್  ಇದೆ. ನನ್ನ ಚಿಕ್ಕಮಗಳಿಗೂ ಕೂಡ ಪಾಸ್ ಪೋರ್ಟ್ ಇದೆ. ಆದರೆ ನನ್ನ ಮಗ ಉಮರ್ ಖಲೀದ್ ಗೆ ಪಾಸ್ ಪೋರ್ಟ್ ಇನ್ನು ದೊರೆತಿಲ್ಲ. ಇಲ್ಲಿಯವರೆಗೂ ಆತ ವಿಮಾನವನ್ನೇ ಹತ್ತಿಲ್ಲ. ಹೀಗಿರುವಾಗ ಆತ ಹೇಗೆ ಪಾಕಿಸ್ತಾನದೊಂದಿಗೆ ಸಂಪರ್ಕ ಸಾಧಿಸಲು ಸಾಧ್ಯ ಖಾಸಿಂ ಪ್ರಶ್ನಿಸಿದ್ದಾರೆ.

SCROLL FOR NEXT