ಕನಯ್ಯಾ ಕುಮಾರ್ (ಕೃಪೆ: ಪಿಟಿಐ)
ನವದೆಹಲಿ: ನನ್ನ ಮಗ ಜೈಲಿನಲ್ಲಿ ಸತ್ತರೆ ಅದಕ್ಕೆ ಯಾರು ಜವಾಬ್ದಾರರು? ಹೀಗೆ ಕೇಳಿದ್ದು ಬಂಧಿತನಾಗಿರುವ ಜೆಎನ್‌ಯು ವಿದ್ಯಾರ್ಥಿ ಸಂಘಟನೆಗಳ ಅಧ್ಯಕ್ಷ ಕನಯ್ಯಾ ಕುಮಾರ್ ಅವರ ತಾಯಿ ಮೀನಾ ದೇವಿ.
ಪಟಿಯಾಲಾ ಹೌಸ್ ಕೋರ್ಟ್ ಆವರಣದಲ್ಲಿ ಕನಯ್ಯಾ ಮೇಲೆ ಹಲ್ಲೆ ನಡೆದಿದ್ದನ್ನು ಪ್ರಶ್ನಿಸಿ ಮೀನಾ ದೇವಿ ಗುರುವಾರ ಆಕ್ರೋಶಭರಿತರಾಗಿ ಮಾತನಾಡಿದ್ದಾರೆ.
ನಾನೊಬ್ಬ ಉಗ್ರನ ಅಮ್ಮ ಅಲ್ಲ. ಅವನೊಬ್ಬ ಉಗ್ರ ಅಲ್ಲ ಎಂಬುದು ಸಾಬೀತಾಗಲಿದೆ ಎಂದು ಗೊತ್ತಿದೆ. ಆದರೆ ಅಲ್ಲಿಯವರೆಗೆ ಪೊಲೀಸ್ ಬಂಧನದಲ್ಲಿರುವ ಆತ ಜೈಲಿನಲ್ಲಿ ಸಾವಿಗೀಡಾದರೆ ಅದಕ್ಕೆ ಯಾರು ಉತ್ತರ ಹೇಳುತ್ತಾರೆ? ಕನಯ್ಯಾನಿಂದ ದೇಶಕ್ಕೇ ಸಂಕಷ್ಟವಿದೆ ಎಂದು ಅವರು ಹೇಳುತ್ತಾರೆ. ಆದರೆ ಇತರ ಸಂಕಷ್ಟಗಳಿಂದ ಅವನನ್ನು ರಕ್ಷಿಸುವವರು ಯಾರು? ಎಂದು ಪಿಟಿಐ ಜತೆ ಫೋನ್‌ನಲ್ಲಿ ಮಾತನಾಡಿದ ಮೀನಾ ದೇವಿ ಪ್ರಶ್ನಿಸಿದ್ದಾರೆ.
ಅವನು ಜೈಲಿನಲ್ಲಿ ಸತ್ತ ನಂತರ, ಆತ ಅಮಾಯಕ ಎಂದು ಸಾಬೀತಾದರೆ ಏನು ಬಂತು? ನನಗೆ ನನ್ನ ಮಗನನ್ನು ವಾಪಸ್ ಕೊಡಲು ಸರ್ಕಾರದಿಂದ ಸಾಧ್ಯವೆ?. ನನ್ನ ಮಗನ ವಿರುದ್ಧ ಕೇಸು ದಾಖಲಿಸಿ ಅದೆಷ್ಟು ಬೇಗ ಆತನನ್ನು ಬಂಧನ ನಡೆಸಿದ್ದರು? ಆದರೆ ಕೋರ್ಟ್ ಆವರಣದಲ್ಲಿ ನನ್ನ ಮಗನ ಮೇಲೆ ಹಲ್ಲೆ ನಡೆಸಿದವರನ್ನು ಬಂಧಿಸಿದರೆ?
ಅಂಗನವಾಡಿ ಕಾರ್ಯಕರ್ತೆಯಾದ ಮೀನಾ ತಿಂಗಳಿಗೆ ರು. 3,500 ಸಂಬಳ ಪಡೆಯುತ್ತಾರೆ. ಕನಯ್ಯಾನ ಅಪ್ಪನಿಗೆ 65 ವರ್ಷವಾಗಿದೆ. ರೈತನಾಗಿದ್ದ ಆತ ಕಳೆದ 7 ತಿಂಗಳಿನಿಂದ ಪಾರ್ಶ್ವವಾಯು ಪೀಡಿತನಾಗಿ ಹಾಸಿಗೆ ಹಿಡಿದಿದ್ದಾನೆ.
ದೇಶದ್ರೋಹದ ಆರೋಪದಲ್ಲಿ ಕಳೆದ ಶುಕ್ರವಾರ ಕನಯ್ಯಾ ಕುಮಾರ್ ನ್ನು ಬಂಧಿಸಲಾಗಿತ್ತು. ಬುಧವಾರ ಪಟಿಯಾಲಾ ಹೌಸ್ ಕೋರ್ಟ್ ಆವರಣದಲ್ಲಿ ಕನಯ್ಯಾ ಮೇಲೆ ಹಲ್ಲೆ ನಡೆದಿದ್ದು, ಆತನನ್ನು ಮಾರ್ಚ್ 2 ರವರೆಗೆ ನ್ಯಾಯಾಂಗ ಬಂಧನದಲ್ಲಿರಿಸಲು ಮೆಟ್ರೋಪೊಲಿಟನ್ ಕೋರ್ಟ್ ಆದೇಶಿಸಿತ್ತು.
Follow KannadaPrabha channel on WhatsApp
Download the KannadaPrabha News app to follow the latest news updates
Subscribe and Receive exclusive content and updates on your favorite topics
Subscribe to KannadaPrabha YouTube Channel and watch Videos