ದೇಶ

ಜಾದವ್ ಪುರ ವಿವಿ ದೇಶವಿರೋಧಿಗಳ ಬಗ್ಗೆ ಎನ್ ಐಎ ತನಿಖೆಗೆ ಬಿಜೆಪಿ ಆಗ್ರಹ

Srinivas Rao BV

ಕೋಲ್ಕತಾ: ಜೆಎನ್ ಯು ವಿವಿಯ ಕೆಲವು ವಿದ್ಯಾರ್ಥಿಗಳ ದೇಶವಿರೋಧಿ ಘೋಷಣೆಯನ್ನು ಪಶ್ಚಿಮ ಬಂಗಾಳದ ಜಾದವ್ ಪುರ ವಿಶ್ವವಿದ್ಯಾನಿಲಯದ ವಿದ್ಯಾರ್ಥಿಗಳು ಬೆಂಬಲಿಸಿದ್ದ ಪ್ರಕರಣದ ಬಗ್ಗೆ ಎನ್ಐಎ ತನಿಖೆ ನಡೆಸಬೇಕೆಂದು ಬಿಜೆಪಿ ಪಟ್ಟು ಹಿಡಿದಿದೆ.
ಜಾದವ್ ಪುರ ವಿವಿಯಲ್ಲಿ ಜೆಎನ್ ಯು ಪ್ರಕರಣವನ್ನು ಬೆಂಬಲಿಸಿದ ಘಟನೆಗೆ ಸಂಬಂಧಿಸಿದಂತೆ ಬಿಜೆಪಿ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ರಾಹುಲ್ ಸಿನ್ಹಾ ಪಶ್ಚಿಮ ಬಂಗಾಳ ರಾಜ್ಯಪಾಲ ಕೇಸರಿನಾಥ್ ತ್ರಿಪಾಠಿ ಅವರನ್ನು ಭೇಟಿ ಮಾಡಿದ್ದು ಕೇವಲ ಪೊಲೀಸ್ ತನಿಖೆ ಮಾತ್ರ ಸಾಕಾಗುವುದಿಲ್ಲ. ದೇಶವಿರೋಧಿಗಳಿಗೆ ಬಂಬಲ ಘೋಷಿಸಿದ ಜಾದವ್ ಪುರ ವಿವಿಯಲ್ಲಿರುವ ದೇಶವಿರೋಧಿ ವಿದ್ಯಾರ್ಥಿಗಳ ಬಗ್ಗೆ ಎನ್ ಐಎ ತನಿಖೆಗೆ ಆದೇಶಿಸಬೇಕು ಎಂದು ಮನವಿ ಮಾಡಿದ್ದಾರೆ.
ಜಾದವ್ ಪುರ ವಿವಿ ದೇಶವಿರೋಧಿಗಳ ನಿಯಂತ್ರಣಕ್ಕೊಳಪಟ್ಟಿದೆ. ಕೆಲವು ಪ್ರಾಧ್ಯಾಪಕರು ವಿದ್ಯಾರ್ಥಿಗಳಿಗೆ ವಿದೇಶಿ ಭಯೋತ್ಪಾದಕರ ನಂಟು ಹೊಂದಲು ಪ್ರಚೋದನೆ ನೀಡುತ್ತಿದ್ದಾರೆ ಆದ್ದರಿಂದ ಈ ಬಗ್ಗೆ ಎನ್ ಐಎ ತನಿಖೆ ನಡೆಸುವುದು ಸೂಕ್ತ ಎಂದು ಬಿಜೆಪಿ ಮುಖಂಡ ರಾಹುಲ್ ಸಿನ್ಹಾ ರಾಜ್ಯಪಾಲರಿಗೆ ಮನವಿ ಮಾಡಿದ್ದಾರೆ. 
ಬಿಜೆಪಿ ನಾಯಕರ ಹೇಳಿಕೆಯನ್ನು ತಿರಸ್ಕರಿಸಿರುವ ಜಾದವ್ ಪುರ ವಿವಿ ಯ ಉಪಕುಲಪತಿ ದಾಸ್ ರಾಜ್ಯಪಾಲರಿಗೆ ವಿವರಣೆ ನೀಡಿದ್ದು, ಕೆಲವೊಂದು ಘಟನೆಗಳನ್ನು ಮುಂದಿಟ್ಟುಕೊಂಡು ಇಡಿ ವಿವಿಯ ಬಗ್ಗೆ ಆರೋಪ ಹೊರಿಸುವುದು ಸೂಕ್ತ ಅಲ್ಲ.ನೆಹರು ವಿವಿಯಲ್ಲಿ ನಡೆದ ದೇಶವಿರೋಧಿ ಘಟನೆಗೆ ಜಾದವ್ ಪುರ ವಿವಿಯಲ್ಲಿ ಬೆಂಬಲ ವ್ಯಕ್ತವಾಗಿದ್ದು ದುರದೃಷ್ಟಕರ. ವಿವಿಯ ವಿದ್ಯಾರ್ಥಿ ಸಂಘಟನೆ ನಾಯಕರು ತಮ್ಮನ್ನು ಭೇಟಿ ಮಾಡಿದ್ದು ದೇಶವಿರೋಧಿ ಘೋಷಣೆಗಳನ್ನು ಬೆಂಬಲಿಸುವುದಿಲ್ಲ ಎಂದು ಹೇಳಿದ್ದಾರೆ ಎಂದು ಉಪಕುಲಪತಿ ರಾಜ್ಯಪಾಲರಿಗೆ ತಿಳಿಸಿದ್ದಾರೆ. ಈ ಬಗ್ಗೆ ಪಶ್ಚಿಮ ಬಂಗಾಳದ ಆಡಳಿತ ಪಕ್ಷ ತೃಣಮೂಲ ಕಾಂಗ್ರೆಸ್, ಕಾಂಗ್ರೆಸ್ ಯಾವುದೇ ಪ್ರತಿಕ್ರಿಯೆ ನೀಡಿಲ್ಲ. 

SCROLL FOR NEXT