ನವದೆಹಲಿ: ಜೆಎನ್ ಯು ನಲ್ಲಿ ದೇಶ ವಿರೋಧಿ ಘೋಷಣೆ ಪ್ರಕರಣಕ್ಕೆ ಸಂಬಂಧಿಸಿದಂತೆ ಬಂಧನಕ್ಕೊಳಗಾಗಿರುವ ವಿದ್ಯಾರ್ಥಿ ಸಂಘದ ನಾಯಕ ಕನ್ಹಯ್ಯ ಕುಮಾರ್, ಕ್ಯಾಂಪಸ್ ನಲ್ಲಿ ದೇಶವಿರೋಧಿ ಚಟುವಟಿಕೆಗೆ ಅವಕಾಶ ನೀಡಬಾರದು ಎಂದು ಪೊಲೀಸರಿಗೆ ವಿಚಾರಣೆ ವೇಳೆ ಹೇಳಿದ್ದಾನೆ.
ದಿ ನ್ಯೂ ಇಂಡಿಯನ್ ಎಕ್ಸ್ ಪ್ರೆಸ್ ನಲ್ಲಿ ಪ್ರಕಟವಾದ ವರದಿ ಪ್ರಕಾರ, ಪೊಲೀಸ್ ವಿಚಾರಣೆ ವೇಳೆ ಕನ್ಹಯ್ಯ ಕುಮಾರ್ ದೇಶವಿರೋಧಿ ಚಟುವಟಿಕೆಗಳಿಗೆ ಅವಕಾಶ ನೀಡಬಾರದು ಎಂದು ಹೇಳಿದ್ದಾನೆ. ಆದರೆ ಉಗ್ರ ಅಫ್ಜಲ್ ಗುರು ಹಾಗೂ ಮಾಕ್ಬೂಲ್ ಭಟ್ ಗಲ್ಲು ಶಿಕ್ಷೆಯನ್ನು ವಿರೋಧಿಸಿ ಫೆ.9 ರಂದು ಜೆಎನ್ ಯು ಕ್ಯಾಂಪಸ್ ನಲ್ಲಿ ಸಾಂಸ್ಕೃತಿಕ ಕಾರ್ಯಕ್ರಮದ ಹೆಸರಿನಲ್ಲಿ ನಡೆದ ಕಾರ್ಯಕ್ರಮವನ್ನು ಸಮರ್ಥಿಸಿಕೊಂಡಿದ್ದಾನೆ.
ಸಾಂಸ್ಕೃತಿಕ ಕಾರ್ಯಕ್ರಮ ನಡೆಯುತ್ತಿರಬೇಕಾದರೆ ಎಬಿವಿಪಿ ಸಂಘಟನೆ ಸದಸ್ಯರ ಮೂಲಕ ಸಬರ್ಮತಿ ಹಾಸ್ಟೆಲ್ ಬಳಿಯ ರಸ್ತೆಯನ್ನು ಬಂದ್ ಮಾಡಿಸುವುದರ ಬಗ್ಗೆ ಕೆಲವು ವಿದ್ಯಾರ್ಥಿಗಳು ಮಾತನಾಡುತ್ತಿದ್ದರು. ಮತ್ತೊಂದು ವಿದ್ಯಾರ್ಥಿಗಳ ಗುಂಪು ಮೆರವಣಿಗೆ ನಡೆಸುತ್ತಿತ್ತು, ಎರಡೂ ಗುಂಪುಗಳ ನಡುವೆ ವಾಗ್ವಾದ ಪ್ರಾರಂಭವಾಯಿತು, ವಾಗ್ವಾದವನ್ನು ನಿಯಂತ್ರಿಸಲು ಯತ್ನಿಸಿದೆ. ಪೊಲೀಸರು ಬಂದ ನಂತರವಷ್ಟೇ ಎರಡೂ ಗುಂಪುಗಳ ನಡುವಿನ ಘರ್ಷಣೆ ಅಂತ್ಯವಾಯಿತು. ಆದರೆ ಅಲ್ಲಿ ಯಾವುದೇ ರೀತಿಯ ದೇಶವಿರೋಧಿ ಘೋಷಣೆ ಕೂಗಿಲ್ಲ ಎಂದು ಕನ್ಹಯ್ಯ ಪೊಲೀಸರಿಗೆ ತಿಳಿಸಿದ್ದಾನೆ.