ದೇಶ

ಜಾಟ್ ಪ್ರತಿಭಟನೆ: ಹರಿಯಾಣ ಸಿಎಂಗೆ ರೋಹ್ತಕ್ ಗ್ರಾಮಸ್ಥರಿಂದ ತರಾಟೆ

Lingaraj Badiger
ನವದೆಹಲಿ: ಮೀಸಲಾತಿಗೆ ಆಗ್ರಹಿಸಿ ಪ್ರತಿಭಟನೆ ನಡೆಸುತ್ತಿರುವ ಜಾಟ್ ಸಮುದಾಯದ ನಾಯಕರು ಹರಿಯಾಣ ಮುಖ್ಯಮಂತ್ರಿ ಮನೋಹರ್ ಲಾಲ್ ಖಟ್ಟರ್ ಅವರ ಕಾರಿಗೆ ಮುತ್ತಿಗೆ ಹಾಕಿ, ಅವರನ್ನು ತೀವ್ರ ತರಾಟೆಗೆ ತೆಗೆದುಕೊಂಡ ಘಟನೆ ಮಂಗಳವಾರ ರೋಹ್ತಕ್ ನಲ್ಲಿ ನಡೆದಿದೆ.
ಖಟ್ಟರ್ ಅವರು ಇಂದು ಜಾಟ್ ಪ್ರಾಬಲ್ಯವಿರುವ ರೋಹ್ತಕ್ ಜಿಲ್ಲೆಗೆ ಭೇಟಿ ನೀಡಿದರು. ಈ ವೇಳೆ ಅವರ ಕಾರಿಗೆ ಮುತ್ತಿಗೆ ಹಾಕಿದ ಪ್ರತಿಭಟನಾಕಾರರು, ಹರಿಯಾಣ ಪೊಲೀಸ್ ಮುರ್ದಾಬಾದ್ ಎಂದು ಘೋಷಣೆ ಕೂಗಿದರು. ಹಿಂಸಾಚಾರ ನಿಯಂತ್ರಿಸುವಲ್ಲಿ ಪೊಲೀಸರು ವಿಫಲವಾಗಿದ್ದಾರೆ ಎಂದು ಆರೋಪಿಸಿದರು. ಅಲ್ಲದೆ ಖಟ್ಟರ್ ಅವರಿಗೆ ಕಪ್ಪು ಭಾವುಟ ಪ್ರದರ್ಶಿಸಲಾಯಿತು.
ಇನ್ನು ಈ ವೇಳೆ ಮಾತನಾಡಿದ ಹರಿಯಾಣ ಸಿಎಂ, ಸಂಪೂರ್ಣ ಘಟನೆಗಳ ಬಗ್ಗೆ ಪರಿಶೀಲಿಸಲು ಸಮಿತಿಯೊಂದನ್ನು ರಚಿಸಲಾಗುವುದು. ಲೋಪದೋಷ ಎಸಗಿದ ಯಾರೇ ಆಗಿದ್ದರೂ ಅವರನ್ನು ಶಿಕ್ಷಿಸಲಾಗುವುದು. ಚಳವಳಿ ಸಂದರ್ಭದಲ್ಲಿ ಆಸ್ತಿಪಾಸ್ತಿಗೆ ಹಾನಿ ಉಂಟು ಮಾಡಿದವರ ವಿರುದ್ಧ ಕಠಿಣ ಕ್ರಮ ಕೈಗೊಳ್ಳಲಾಗುವುದು ಎಂದು ಹೇಳಿದರು. ಅಲ್ಲದೆ ಚಳವಳಿ ಕಾಲದಲ್ಲಿ ನಡೆದದ್ದೆಲ್ಲವೂ ಷಡ್ಯಂತ್ರದ ಭಾಗ ಎಂದು ಅವರು ನುಡಿದರು.
ಈ ಮಧ್ಯೆ ಮೀಸಲಾತಿ ಚಳವಳಿ ಬಗ್ಗೆ ವಿವರ ನೀಡಲು ದೆಹಲಿಗೆ ಆಗಮಿಸುವಂತೆ ಕೇಂದ್ರ ಸಂಸದೀಯ ವ್ಯವಹಾರಗಳ ಸಚಿವ ಎಂ. ವೆಂಕಯ್ಯ ನಾಯ್ಡು ಅವರು ಮನೋಹರ್ ಲಾಲ್ ಖಟ್ಟರ್, ಕೃಷಿ ಸಚಿವ ಒಪಿ ಧನ್​ಕರ್ ಮತ್ತು ರಾಜ್ಯ ಹಣಕಾಸು ಸಚಿವ ಕ್ಯಾಪ್ಟನ್ ಅಭಿಮನ್ಯು ಅವರಿಗೆ ಸೂಚಿಸಿದ್ದಾರೆ.
SCROLL FOR NEXT