ಪಠಾಣ್ ಕೋಟ್: "ಸಾಯುವ ಮುನ್ನ ಹೊಟ್ಟೆ ತುಂಬ ತಿನ್ನು" ಇದು ಪಠಾಣ್ ಕೋಟ್ ನಲ್ಲಿ ಭಾರತೀಯ ಸೈನಿಕರ ಗುಂಡೇಟಿಗೆ ಬಲಿಯಾದ ಉಗ್ರನಿಗೆ ಆತನ ತಾಯಿ ಹೇಳಿದ ಕೊನೆಯ ಮಾತು.
ಪಂಜಾಬ್ ನ ಪಠಾಣ್ ಕೋಟ್ ನಲ್ಲಿರುವ ಭಾರತೀಯ ಸೇನೆಯ ವಾಯು ನೆಲೆ ಮೇಲೆ ದಾಳಿ ನಡೆಸಿದ ಉಗ್ರರ ಪೈಕಿ ಓರ್ವ ದಾಳಿಗೂ ಮುನ್ನ ಉಗ್ರ ತನ್ನ ಅಮ್ಮನಿಗೆ ಕರೆ ಮಾಡಿದ್ದು, ಈ ವೇಳೆ ಆತನ ತಾಯಿ "ಸಾಯುವ ಮುನ್ನ ಹೊಟ್ಟೆ ತುಂಬ ತಿನ್ನು" ಎಂದು ಹೇಳಿದ್ದಳು ಎಂದು ಗುಪ್ತಚರ ಮೂಲಗಳು ತಿಳಿಸಿವೆ. ಪಠಾಣ್ ಕೋಟ್ ಸೇನಾ ವಾಯುನೆಲೆಯ ಮೇಲೆ ಇಂದು ನಡೆದ ಉಗ್ರರ ದಾಳಿ ಪ್ರಕರಣ ಇಡೀ ದೇಶವನ್ನು ಬೆಚ್ಚಿ ಬೀಳಿಸಿದ್ದು, ಪ್ರಕರಣವನ್ನು ಗಂಭೀರವಾಗಿ ಪರಿಗಣಿಸಿರುವ ಕೇಂದ್ರ ಗುಪ್ತಚರ ಇಲಾಖೆಯ ಅಧಿಕಾರಿಗಳು ಇಂದು ವಿದೇಶಕ್ಕೆ ಹೋದ 4 ಸಂಶಾಯಾಸ್ಪದ ಕರೆಗಳನ್ನು ಪರಿಶೀಲಿಸಿದ್ದಾರೆ.
ಈ ನಾಲ್ಕು ಕರೆಗಳ ಪೈಕಿ ಒಂದು ಕರೆಯನ್ನು ಪಠಾಣ್ ಕೋಟ್ ಮೇಲೆ ದಾಳಿ ಮಾಡಿರುವ ಉಗ್ರರ ಪೈಕಿ ಓರ್ವ ಉಗ್ರ ಮಾಡಿದ್ದು, ಪಾಕಿಸ್ತಾನದಲ್ಲಿರುವ ತನ್ನ ತಾಯಿಗೆ ಕರೆ ಮಾಡಿದ್ದಾನೆ ಎಂದು ತಿಳಿದುಬಂದಿದೆ. ಮಾತಿನ ವೇಳೆ ತಾಯಿ "ನೀನು ಸಾಯುವ ಮುನ್ನ ಹೊಟ್ಟೆ ತುಂಬ ತಿನ್ನು" ಎಂದು ಹೇಳಿದ್ದಾಳೆ.
ಪಾಕಿಸ್ತಾನ ಮೂಲದ ಉಗ್ರರು ಇಂದು ಮುಂಜಾನೆ ಪಂಜಾಬ್ ನಲ್ಲಿರುವ ಪಠಾಣ್ ಕೋಟ್ ನ ಸೇನಾ ವಾಯುನೆಲೆಯನ್ನು ಗುರಿಯಾಗಿಸಿಕೊಂಡು ದಾಳಿ ನಡೆಸಿದ್ದರು. ಗುಂಡಿನ ಚಕಮಕಿಯಲ್ಲಿ ಭಾರತೀಯ ಸೇನೆಯ ಮೂವರು ಸೈನಿಕರು ಹುತಾತ್ಮರಾಗಿದ್ದು, ನಾಲ್ಕು ಉಗ್ರರು ಹತರಾಗಿದ್ದಾರೆ. ಉಗ್ರರ ವಿರುದ್ಧದ ಕಾರ್ಯಾಚರಣೆ ಇನ್ನೂ ಮುಂದುವರೆದಿದ್ದು, ಕಾರ್ಯಾಚರಣೆಗೆ ವಾಯುಸೇನೆಯ ಹೆಲಿಕಾಪ್ಟರ್ ಬಳಕೆ ಮಾಡಲಾಗುತ್ತಿದೆ.