ದೇಶ

ಬಿಎಸ್ಎನ್ಎಲ್ ನೌಕರರ ಮೂಲಕ ರಕ್ಷಣಾ ಸಂಪರ್ಕ ವಿವರ ಪಡೆಯಲು ಯತ್ನಿಸಿದ್ದ ಐಎಸ್ಐ

Srinivas Rao BV

ಜೈಸಲ್ಮೇರ್: ಪಾಕಿಸ್ತಾನ ಗುಪ್ತಚರ ಸಂಸ್ಥೆ ಐಎಸ್ಐ ಭಾರತದ ರಕ್ಷಣಾ ಕೇಂದ್ರಗಳ ಸಂಪರ್ಕ ವಿವರಗಳನ್ನು ಪಡೆಯಲು ಯತ್ನಿಸುತ್ತಿದ್ದು, ಪರಿಶೀಲನೆ ನಡೆಸದೆ ತಮಗೆ ಕರೆ ಮಾಡಿರುವವರೊಂದಿಗೆ ಸಂಪರ್ಕ ವಿವರಗಳನ್ನು ಯಾರೊಂದಿಗೂ ಹಂಚಿಕೊಳ್ಳದಂತೆ ರಾಜಸ್ತಾನದ ರಕ್ಷಣಾ ಕೇಂದ್ರಕ್ಕೆ ಸೂಚನೆ ನೀಡಲಾಗಿದೆ.
ಇಂಟರ್ ನೆಟ್ ಕರೆ ಮೂಲಕ ರಕ್ಷಣಾ ಕೇಂದ್ರದ ವಿವರಗಳನ್ನು ಪಡೆಯಲು ಯತ್ನಿಸುತ್ತಿರುವ ಐಎಸ್ಐ ಬಗ್ಗೆ ಎಚ್ಚರದಿಂದ ಇರುವಂತೆ ರಕ್ಷಣಾ ಕೇಂದ್ರದ ಅಧಿಕಾರಿಗಳಿಗೆ ಜೈಸಲ್ಮೇರ್ ಜಿಲ್ಲಾ ಪೊಲೀಸರು ಸೂಚನೆ ನೀಡಿದ್ದಾರೆ. ಬಿಎಸ್ಎನ್ಎಲ್ ಕಚೇರಿಯ ನೌಕರರ ಮೂಲಕ ಭಾರತೀಯ ಸೇನೆಯಲ್ಲಿರುವ ಸೈನಿಕರು ಹಾಗೂ ಅಧಿಕಾರಿಗಳ ಬಗ್ಗೆ ಮಾಹಿತಿ ಕಲೆಹಾಕಲು ಯತ್ನಿಸುತ್ತಿದೆ. 2015 ರ ಸೆಪ್ಟೆಂಬರ್ ಹಾಗೂ ಡಿಸೆಂಬರ್ ನಲ್ಲಿ ಇಂಥಹ ಕರೆಗಳು ಐಎಸ್ಐ ನಿಂದ ಬಂದಿತ್ತು ಎಂಬ ಮಾಹಿತಿಯೂ ಬಹಿರಂಗವಾಗಿದೆ.
ಪೋಕರಾನ್ ನ ಉಪವಿಭಾಗದಲ್ಲಿ ಸೇನಾ ಅಭ್ಯಾಸ ನಡೆಯುತ್ತಿರಬೇಕಾದರೆ, ಇಂಟರ್ ನೆಟ್ ಕರೆ ಮಾಡಿದ್ದ ಐಎಸ್ಐ, ಅಧಿಕಾರಿಗಳು ಹಾಗೂ ಸೈನಿಕರ ದೂರವಾಣಿ ಬಿಲ್ ಬಗ್ಗೆ ಮಾಹಿತಿ ಕೇಳಿತ್ತು. ಅಲ್ಲದೇ ಭಾರತದಲ್ಲಿರುವ ಸೇನಾ ಪ್ರದೇಶಗಳ ಬಗ್ಗೆ ಮಾಹಿತಿಯನ್ನೂ ಕೇಳಿತ್ತು. ಈ ಕರೆ ಪಾಕಿಸ್ತಾನದಿಂದ ಬಂದಿತ್ತಾದರೂ, ಇಂಟರ್ ನೆಟ್ ಕಾಲಿಂಗ್ ಮೂಲಕ ಕರೆ ಮಾಡಿರುವ ಸ್ಥಳವನ್ನು ಗೌಪ್ಯವಾಗಿಡಲಾಗಿತ್ತು. ಆದರೂ ಬಿಎಸ್ಎನ್ಎಲ್ ಸಂಸ್ಥೆ ಕರೆಯ ನಿಜವಾದ ಸ್ಥಳವನ್ನು ಗುರುತಿಸಲು ಯಶಸ್ವಿಯಾಯಿತು ಎಂದು ಅಧಿಕಾರಿಯೊಬ್ಬರು ಮಾಹಿತಿ ನೀಡಿದ್ದಾರೆ. ಗಡಿ ಪ್ರದೇಶದಲ್ಲಿರುವ ಸೇನೆಗೆ ಪಾಕಿಸ್ತಾನದಿಂದ ಬರುವ ಇಂತಹ ಗೌಪ್ಯ ಕರೆಗಳು ಅಪಾಯಕಾರಿಯಾಗಿರುತ್ತವೆ ಎಂದು ರಕ್ಷಣಾ ಸಚಿವಾಲಯದ ವಕ್ತಾರ ಲೆಫ್ಟಿನೆಂಟ್ ಕರ್ನಲ್ ಮನಿಶ್ ಓಜಾ ಹೇಳಿದ್ದಾರೆ. ಈ ಬಗ್ಗೆ ಎಚ್ಚರದಿಂದ ಇರುವಂತೆ ಹಾಗೂ ಸ್ವಯಂ ನಿಯಂತ್ರಣ ವಿಧಿಸಿಕೊಳ್ಳುವಂತೆ ರಕ್ಷಣಾ ಅಧಿಕಾರಿಗಳಿಗೆ ಎಚ್ಚರಿಕೆ ನೀಡಲಾಗಿದೆ ಎಂದು ಮನಿಶ್ ಓಜಾ ತಿಳಿಸಿದ್ದಾರೆ.

SCROLL FOR NEXT