ದೇಶ

ಉತ್ತರ ಮತ್ತು ಈಶಾನ್ಯ ಭಾರತದಲ್ಲಿ ಭಾರಿ ಭೂಕಂಪ ಸಾಧ್ಯತೆ..!

Srinivasamurthy VN

ನವದೆಹಲಿ: ಉತ್ತರ ಭಾರತ ಮತ್ತು ಈಶಾನ್ಯ ಭಾರತದಲ್ಲಿ ಭಾರಿ ಭೂಕಂಪನ ಸಂಭವಿಸುವ ಸಾಧ್ಯತೆ ಇದೆ ಎಂದು ಹೇಳಲಾಗುತ್ತಿದೆ.

ಕೇಂದ್ರದ ಗೃಹ ಇಲಾಖೆಗೆ ಕೇಂದ್ರ ಹವಾಮಾನ ಇಲಾಖೆ ನೀಡಿರುವ ಮಾಹಿತಿಯನ್ವಯ ಈಶಾನ್ಯ ಭಾರತ ಮತ್ತು ಉತ್ತರ ಭಾರತದ ಕೆಲ ರಾಜ್ಯಗಳಲ್ಲಿ ಶೇ.8.0 ಅಥವಾ ಅದಕ್ಕಿಂತಲೂ ಹೆಚ್ಚಿನ  ಪ್ರಮಾಣದ ಭೂಕಂಪನ ಸಂಭವಿಸುವ ಸಾಧ್ಯತೆ ಇದೆ ಎಂದು ರಾಷ್ಟ್ರೀಯ ಆಂಗ್ಲ ಪತ್ರಿಕೆಯೊಂದು ವರದಿ ಮಾಡಿದೆ. ಪತ್ರಿಕೆಯ ವರದಿಯಲ್ಲಿ ಈಶಾನ್ಯ ಭಾರತದ ಹಿಮಾಲಯ ಪರ್ವತ ಶ್ರೇಣಿಯ  ರಾಜ್ಯಗಳು ಭೂಕಂಪನದ ಹೊಡೆತಕ್ಕೆ ಸಿಲುಕಲಿವೆ ಎಂದು ಎಚ್ಚರಿಕೆ ನೀಡಲಾಗಿದೆ.

ಇನ್ನು ವರದಿಯಲ್ಲಿ ಮಣಿಪುರ ರಾಜ್ಯ ಅತಿ ಹೆಚ್ಚು ಹಾನಿಗೊಳಗಾಗುವ ರಾಜ್ಯಗಳ ಪಟ್ಟಿಯಲ್ಲಿ ಮುಂಚೂಣಿಯಲ್ಲಿದೆ ಎಂದು ವರದಿ ಹೇಳಿದೆ. ಸೋಮವಾರವಷ್ಟೇ ಈಶಾನ್ಯ ಭಾರತದ ಕೆಲ  ಪ್ರದೇಶಗಳಲ್ಲಿ ಭೂಕಂಪನ ಸಂಭವಿಸಿತ್ತು. ಇದರ ವರದಿಯನ್ನು ವಿಶ್ಲೇಷಿಸಿರುವ ಹವಾಮಾನ ಇಲಾಖೆಯ ತಜ್ಞರು ಸದ್ಯದಲ್ಲಿಯೇ ಉತ್ತರ ಭಾರತ ಮತ್ತು ಈಶಾನ್ಯ ಭಾರತದಲ್ಲಿ ಭಾರಿ  ಪ್ರಮಾಣದ ಭೂಕಂಪನ ಸಂಭವಿಸುವ ಸಾಧ್ಯತೆ ಇದೆ ಎಂದು ಹೇಳಿದ್ದಾರೆ ಎಂದು ಪತ್ರಿಕೆ ವರದಿ ಮಾಡಿದೆ.

ಕಳೆದ ವರ್ಷ ಮೇ ತಿಂಗಳಿನಲ್ಲಿ ನೇಪಾಳದಲ್ಲಿ 7.3 ತೀವ್ರತೆ ಭೂಕಂಪನ ಸಂಭವಿಸಿತ್ತು. ಇದಾದ ಬಳಿಕ ಜನವರಿ 2016ರಲ್ಲಿ ಮಣಿಪುರದಲ್ಲಿ 6.7 ತೀವ್ರತೆಯ ಭೂಕಂಪನ ಸಂಭವಿಸಿತ್ತು. ಈ  ಎರಡೂ ಪ್ರಕರಣಗಳನ್ನು ವಿಶ್ಲೇಷಿಸಿರುವ ತಜ್ಞರು ಭವಿಷ್ಯದಲ್ಲಿ ಇದಕ್ಕಿಂತಲೂ ಹೆಚ್ಚಿನ ಪ್ರಮಾಣದ ಭೂಕಂಪನದ ಸಂಭವವಿದೆ ಎಂದು ಹೇಳಿದ್ದಾರೆ ಎಂದು ತಿಳಿದುಬಂದಿದೆ.

SCROLL FOR NEXT