ನವದೆಹಲಿ: ಕೇಂದ್ರ ಸಂಸದೀಯ ವ್ಯವಹಾರಗಳ ಸಚಿವ ಎಂ.ವೆಂಕಯ್ಯ ನಾಯ್ಡು ಗುರುವಾರ ಕಾಂಗ್ರೆಸ್ ಅಧ್ಯಕ್ಷೆ ಸೋನಿಯಾ ಗಾಂಧಿಯವರನ್ನು ಭೇಟಿ ಮಾಡಿ ಬಜೆಟ್ ಅಧಿವೇಶನದಲ್ಲಿ ಸರಕು ಮತ್ತು ಸೇವಾ ತೆರಿಗೆ(ಜಿಎಸ್ಟಿ)ಮಸೂದೆ ಹಾಗೂ ರಿಯಲ್ ಎಸ್ಟೇಟ್ ಮಸೂದೆಗೆ ಒಪ್ಪಿಗೆ ನೀಡಲು ಸಹಕರಿಸಬೇಕೆಂದು ಕೋರಿದರು.
ಇಂದು ಬೆಳಗ್ಗೆ ದೆಹಲಿಯ 10, ಜನಪಥ್ ರಸ್ತೆಯಲ್ಲಿರುವ ಸೋನಿಯಾ ಗಾಂಧಿ ನಿವಾಸಕ್ಕೆ ತೆರಳಿದ ಸಚಿವರು ಸುಮಾರು 20 ನಿಮಿಷಗಳ ಕಾಲ ಮಾತುಕತೆ ನಡೆಸಿದರು. ಈ ಸಂದರ್ಭದಲ್ಲಿ ಜಿಎಸ್ಟಿ ಮಸೂದೆ ಬಗ್ಗೆ ಕಾಂಗ್ರೆಸ್ ನೀಡಿದ ಮೂರು ಪ್ರಮುಖ ಸಲಹೆಗಳ ಬಗ್ಗೆ ಸರ್ಕಾರದ ನಿಲುವೇನೆಂದು ಕಾಂಗ್ರೆಸ್ ಅಧ್ಯಕ್ಷೆ ಕೇಳಿದ್ದಾರೆಂದು ತಿಳಿದುಬಂದಿದೆ.
ಕಾಂಗ್ರೆಸ್ ಎತ್ತಿದ ವಿಷಯಗಳನ್ನು ಸರ್ಕಾರ ಪರಿಗಣಿಸಿದೆ ಎಂದು ವೆಂಕಯ್ಯ ನಾಯ್ಡು ತಿಳಿಸಿದ್ದಾರೆ ಎನ್ನಲಾಗಿದೆ. ರಿಯಲ್ ಎಸ್ಟೇಟ್ ಮಸೂದೆಗೆ ಸಂಬಂಧಪಟ್ಟಂತೆ ಕಾಂಗ್ರೆಸ್ ಮತ್ತು ಇತರ ಪಕ್ಷಗಳು ನಿರ್ಧರಿಸಿದಂತೆ ಮಸೂದೆಯನ್ನು ರಾಜ್ಯಸಭೆಯ ಆಯ್ಕೆ ಸಮಿತಿಗೆ ಕಳುಹಿಸಿದ್ದು, ಸಮಿತಿಯ ಎಲ್ಲಾ ಶಿಫಾರಸುಗಳನ್ನು ಸರ್ಕಾರ ಸ್ವೀಕರಿಸಿದೆ ಎನ್ನಲಾಗಿದೆ.
ಎಲ್ಲಾ ರಾಜಕೀಯ ಪಕ್ಷಗಳು ಒಪ್ಪಿಕೊಂಡರೆ ಮಸೂದೆ ಅಂಗೀಕಾರಕ್ಕೆ ಬಜೆಟ್ ಅಧಿವೇಶನವನ್ನು ಸರ್ಕಾರ ನಿಗದಿಪಡಿಸಿದ ದಿನಕ್ಕೆ ಮೊದಲು ಆರಂಭಿಸುವ ಬಗ್ಗೆಯೂ ವೆಂಕಯ್ಯ ನಾಯ್ಡು ಸೋನಿಯಾ ಗಾಂಧಿಯವರನ್ನು ಕೋರಿದರು. ಇದಕ್ಕೆ ತಮ್ಮ ಪಕ್ಷದ ನಾಯಕರ ಜೊತೆ ಚರ್ಚಿಸಿ ತಿಳಿಸುವುದಾಗಿ ಸೋನಿಯಾ ಗಾಂಧಿಯವರು ತಿಳಿಸಿದ್ದಾರೆ ಎಂದು ಗೊತ್ತಾಗಿದೆ.