ಪಠಾಣ್‌ಕೋಟ್ ವಾಯುನೆಲೆ ಮೇಲೆ ದಾಳಿ ನಡೆಸಿ ಸೈನಿಕರ ಗುಂಡಿಗೆ ಬಲಿಯಾದ ಉಗ್ರರು
ನವದೆಹಲಿ: ಪಠಾಣ್‌ಕೋಟ್ ವಾಯುನೆಲೆ ಮೇಲೆ ದಾಳಿ ನಡೆಸಿ ಸೈನಿಕರ ಗುಂಡಿಗೆ ಬಲಿಯಾದ ಉಗ್ರರ ಫೋಟೋ ಈಗ ಬಹಿರಂಗವಾಗಿದೆ. ದಾಳಿ ನಡೆಸಲು ಬಂದ ಉಗ್ರರ ವಿರುದ್ಧ ಭದ್ರತಾ ಪಡೆ ಹೋರಾಡಿದ ರೀತಿ ಮತ್ತು ಪ್ರತಿದಾಳಿಗೆ ಎನ್‌ಎಸ್‌ಜಿಯನ್ನು ಕರೆತಂದದ್ದು ಎಲ್ಲವೂ ಟೀಕೆಗೊಳಪಟ್ಟಿತ್ತು. ಈ ಹಿನ್ನಲೆಯಲ್ಲಿ ಮೃತ ಉಗ್ರರ ಫೋಟೋಗಳನ್ನೀಗ ಬಹಿರಂಗ ಪಡಿಸಲಾಗಿದೆ.
ಆಪರೇಷನ್ ಧಂಗು ಎಂಬ ಹೆಸರಿಟ್ಟು ವಾಯುನೆಲೆ ಮೇಲೆ ದಾಳಿ ಮಾಡಿದ ಉಗ್ರರನ್ನು ಭಾರತೀಯ ಸೇನೆ ಹತ್ಯೆಗೈದಿತ್ತು. ವಾಯುನೆಲೆ ಇರುವ ಗ್ರಾಮದ ಹೆಸರಾಗಿದೆ ಧಂಗು. ಆದ ಕಾರಣ ಈ ಕಾರ್ಯಾಚರಣೆಗೆ ಆಪರೇಷನ್ ಧಂಗು ಎಂದು ಹೆಸರಿಡಲಾಗಿತ್ತು.
ಮೂರು ದಿನಗಳ ಕಾಲ ನಡೆದ ಕಾರ್ಯಾಚರಣೆಯಲ್ಲಿ 6 ಉಗ್ರರನ್ನು ಸೇನೆ ಹತ್ಯೆಗೈದಿತ್ತು. ಅದೇ ವೇಳೆ ಏಳು ಯೋಧರು ಈ ಕಾರ್ಯಾಚರಣೆಯಲ್ಲಿ ಹುತಾತ್ಮರಾಗಿದ್ದಾರೆ. ಇನ್ನೂ ಇಬ್ಬರು ಉಗ್ರರು ಪಠಾಣ್‌ಕೋಟ್‌ನಲ್ಲೇ ಇದ್ದಾರೆ, ಅವರನ್ನು ಗ್ರಾಮಸ್ಥರು ನೋಡಿದ್ದಾರೆ ಎಂದು ಸುದ್ದಿಯಾಗಿದ್ದರೂ, ಈ ಸುದ್ದಿ ಅಧಿಕೃತ ಎಂಬ ಮಾಹಿತಿ ಇಲ್ಲಿವರೆಗೆ ಸಿಕ್ಕಿಲ್ಲ.