ನವದೆಹಲಿ: ಅರುಣ್ ಜೇಟ್ಲಿ ಅವರ ವಿರುದ್ಧ ಇಲ್ಲ ಸಲ್ಲದ ಆರೋಪ ಹೊರಿಸಿರುವ ಅರವಿಂದ್ ಕೇಜ್ರಿವಾಲ್ ಅವರೇ ಜೈಲಿಗೆ ಹೋಗಲು ಸಿದ್ಧರಾಗಿ ಎಂದು ಬಿಜೆಪಿ ಹೇಳಿದೆ.
ಅರವಿಂದ್ ಕೇಜ್ರಿವಾಲ್ ನೇತೃತ್ವದ ದೆಹಲಿ ಸರ್ಕಾರ ಒಂದಾದರ ಮೇಲೊಂದು ಅಸವಿಂಧಾನಿಕ ಕ್ರಮಗಳನ್ನು ಕೈಗೊಳ್ಳುತ್ತಿದ್ದು, ಆಡಳಿತ ನಿಯಂತ್ರಣದಲ್ಲಿ ಕೇಜ್ರಿವಾಲ್ ಸಂಪೂರ್ಣ ವಿಫಲರಾಗಿದ್ದಾರೆ. ಇನ್ನು ಕೇಂದ್ರ ಸಚಿವ ಮತ್ತು ಬಿಜೆಪಿ ಮುಖಂಡ ಅರುಣ್ ಜೇಟ್ಲಿ ಅವರ ವಿರುದ್ಧ ಭ್ರಷ್ಟಾಚಾರ ಪ್ರಕರಣದಲ್ಲಿ ಹೆಸರಿಸಿದ್ದ ಕೇಜ್ರಿವಾಲ್ ಅವರು ಅದನ್ನು ಸಾಬೀತು ಪಡಿಸುವಲ್ಲಿ ವಿಫಲರಾಗಿದ್ದಾರೆ. ಹೀಗಾಗಿ ಖಂಡಿತಾ ಕೇಜ್ರಿವಾಲ್ ಅವರು ಜೈಲಿಗೆ ಹೋಗಲಿದ್ದಾರೆ ಎಂದು ಬಿಜೆಪಿ ಕಿಡಿಕಾರಿದೆ.
ಈ ಬಗ್ಗೆ ದೆಹಲಿಯಲ್ಲಿ ಶನಿವಾರ ಮಾತನಾಡಿರುವ ಬಿಜೆಪಿ ಪಕ್ಷದ ರಾಷ್ಟ್ರೀಯ ಕಾರ್ಯದರ್ಶಿಯಾದ ಶ್ರೀಕಾಂತ್ ಶರ್ಮಾ ಅವರು, "ಆಡಳಿತಾತ್ಮಕವಾಗಿ ದೆಹಲಿ ಸರ್ಕಾರ ವಿಫಲವಾಗಿದ್ದು, ಇದನ್ನು ಜನರಿಂದ ಮರೆಮಾಚಲು ಅರುಣ್ ಜೇಟ್ಲಿ ಅವರ ವಿರುದ್ಧ ಇಲ್ಲ ಸಲ್ಲದ ಆರೋಪಗಳನ್ನು ಮಾಡಿತ್ತು. ಇದೀಗ ಆಪ್ ಮುಖಂಡರ ಬಣ್ಣ ಬಯಲಾಗಿದ್ದು, ಕೇಜ್ರಿವಾಲ್ ಮತ್ತು ಅವರ ಸಂಗಡಿಗರು ಜೈಲಿಗೆ ಹೋಗಲು ಸಿದ್ಧರಾಗಬೇಕಿದೆ" ಎಂದು ಹೇಳಿದರು.
ದೆಹಲಿ ಕ್ರಿಕೆಟ್ ಸಂಸ್ಥೆಯಲ್ಲಿನ ಭ್ರಷ್ಟಾಚಾರ ಪ್ರಕರಣ ಸಂಬಂಧ ಕೇಂದ್ರ ಸಚಿವ ಅರುಣ್ ಜೇಟ್ಲಿ ವಿರುದ್ಧ ಆಮ್ ಆದ್ಮಿ ಪಕ್ಷ ಮತ್ತು ದೆಹಲಿ ಮುಖ್ಯಮಂತ್ರಿ ಅರವಿಂದ್ ಕೇಜ್ರಿವಾಲ್ ಅವರು ಹೊರಿಸಿದ್ದ ಆರೋಪಕ್ಕೆ ತಿರುಗೇಟು ನೀಡಿದ್ದ ಜೇಟ್ಲಿ ಅವರು, ಅರವಿಂದ್ ಕೇಜ್ರಿವಾಲ್ ಅವರ ವಿರುದ್ಧ ಮಾನನಷ್ಟ ಮೊಕದ್ದಮೆ ಹೂಡಿದ್ದರು. ಕಳೆದ ವಾರವಷ್ಟೇ ಕೋರ್ಟ್ ಈ ಪ್ರಕರಣವನ್ನು ವಿಚಾರಣೆಗೆ ತೆಗೆದುಕೊಂಡಿತ್ತು. ಇನ್ನು ಮಹತ್ವದ ಬೆಳವಣಿಗೆಯೊಂದರಲ್ಲಿ ಡಿಡಿಸಿಎ ಭ್ರಷ್ಟಾಚಾರ ಪ್ರಕರಣವನ್ನು ತನಿಖೆ ನಡೆಸಲು ದೆಹಲಿ ಸರ್ಕಾರ ನಿಯೋಜಿಸಿದ್ದ ಸಮಿತಿಯ ಮೊದಲ ವರದಿ ಹೊರಬಿದ್ದಿದ್ದು, ವರದಿಯಲ್ಲಿ ಅರುಣ್ ಜೇಟ್ಲಿ ಅವರ ಹೆಸರೇ ನಮೂದಾಗಿಲ್ಲ. ಇದು ದೆಹಲಿ ಸರ್ಕಾರಕ್ಕೆ ತೀವ್ರ ಹಿನ್ನಡೆಯಾಗುವಂತೆ ಮಾಡಿದೆ.
ಹೀಗಾಗಿ ದೆಹಲಿ ಸರ್ಕಾರ ಮತ್ತು ಅರವಿಂದ್ ಕೇಜ್ರಿವಾಲ್ ಅವರ ವಿರುದ್ಧ ಬಿಜೆಪಿ ಕಾರ್ಯಕರ್ತರ ಪ್ರತಿಭಟನೆ ಮುಂದುವರೆದಿದೆ.