ಮುಂಬೈ: ಪಠಾಣ್ ಕೋಟ್ ದಾಳಿಗೆ ತಕ್ಕ ಪ್ರತ್ಯುತ್ತರ ನೀಡುವುದಕ್ಕೆ ಕೇಂದ್ರ ಸರ್ಕಾರವನ್ನು ಶಿವಸೇನೆ ಒತ್ತಾಯಿಸಿದ್ದು ಪ್ರಧಾನಿ ನರೇಂದ್ರ ಮೋದಿ ಇಂತಹ ದಾಳಿಗಳನ್ನು ಸಹಿಸಿಕೊಳ್ಳುವುದನ್ನು ನಿಲ್ಲಿಸಬೇಕು ಎಂದು ಹೇಳಿದೆ.
ಉಗ್ರರ ದಾಳಿಗಳನ್ನು ಸಹಿಸಿಕೊಳ್ಳುತ್ತಿರುವುದು ಖಂಡನೀಯ, ಎಲ್ಲದಕ್ಕೂ ಒಂದು ಮಿತಿ ಇರುತ್ತದೆ, ಇಂತಹ ದಾಳಿಗಳಿಗೆ ಪ್ರಧಾನಿ ಮೋದಿ ಅವರ ಸಹಿಷ್ಣುತೆ ಅಂತ್ಯವಾಗಲಿ ಎಂದು ಪ್ರಾರ್ಥಿಸುತ್ತೇವೆ ಎಂದು ಶಿವಸೇನೆ ಸಾಮ್ನಾ ಸಂಪಾದಕೀಯದಲ್ಲಿ ಬರೆದಿದೆ.
ಪಠಾಣ್ ಕೋಟ್ ಉಗ್ರ ದಾಳಿ ಘಟನೆಯ ರುವಾರಿಗಳ ವಿರುದ್ಧ ಶೀಘ್ರವೇ ಕ್ರಮ ಕೈಗೊಳ್ಳುವಂತೆ ಅಮೆರಿಕ ಪಾಕಿಸ್ತಾನಕ್ಕೆ ಒತ್ತಡ ಹೇರಿದೆ. ಎಂದಿನಂತೆ ಈ ಬಾರಿಯೂ ಚೆಂಡು ಪಾಕಿಸ್ತಾನದ ಅಂಗಳದಲ್ಲಿದ್ದು ಮುಂದೆ ಏನಾಗಲಿದೆ ಎಂಬುದನ್ನು ಕಾಡು ನೋಡುವುದಷ್ಟೇ ನಮ್ಮ ಕೆಲಸ ಎಂದು ಶಿವಸೇನೆ ಹೇಳಿದೆ.
ಉಗ್ರರ ಮೇಲೆ ಪ್ರತಿ ದಾಳಿ ನಡೆಸುವವರೆಗೂ ಪಠಾಣ್ ಕೋಟ್ ನಂತಹ ದಾಳಿಗಳು ನಿಲ್ಲುವುದಿಲ್ಲ, ಶತ್ರುಗಳನ್ನು ನಾಶ ಮಾಡಲು ಕ್ಷಾತ್ರ ಧರ್ಮಕ್ಕೆ ಭಾರತೀಯ ನಾಯಕರು ಬದ್ಧರಾಗದೆ ಇದ್ದಲ್ಲಿ ಮುಂದಿನ ದಿನಗಳಲ್ಲಿ ಮತ್ತಷ್ಟು ಸಂಕಷ್ಟ ಎದುರಾಗಲಿದೆ ಎಂದು ಶಿವಸೇನೆ ಅಭಿಪ್ರಾಯಪಟ್ಟಿದೆ.