ಮುಂಬೈ: ಇಡೀ ದೇಶದ ಗಮನ ಸೆಳೆದಿದ್ದ 2002ರ ಹಿಟ್ ಅಂಡ್ ರನ್ ಪ್ರಕರಣಕ್ಕೆ ಸಂಬಂಧಿಸಿದಂತೆ ಪೊಲೀಸರು ಮಾಡಿದ್ದ ಯಡವಟ್ಟುಗಳನ್ನು ಮುಂಬೈ ಹೆಚ್ಚುವರಿ ಪೊಲೀಸ್ ಆಯುಕ್ತ ಕೆ.ಎಂ ಪ್ರಸನ್ನ ಅವರು ಪಟ್ಟಿ ಮಾಡಿದ್ದಾರೆ.
ತನಿಖೆ ವೇಳೆ ಮುಂಬೈ ಪೊಲೀಸರು ಮಾಡಿದ್ದ ಸುಮಾರು 16 ತಪ್ಪುಗಳನ್ನು ಪ್ರಸನ್ನ ಅವರು ಪಟ್ಟಿ ಮಾಡಿದ್ದು, ಮುಂದೆ ಈ ರೀತಿಯ ತಪ್ಪುಗಳಾಗದಂತೆ ಮುನ್ನೆಚ್ಚರಿಕೆ ವಹಿಸುವಂತೆ ಎಲ್ಲ ಠಾಣೆಗಳಿಗೆ ಸೂಚನೆ ನೀಡಿದ್ದಾರೆ. ಹಿಟ್ ಆಂಡ್ ರನ್ ಪ್ರಕರಣದಲ್ಲಿ ಬಾಲಿವುಡ್ ನಟ ಸಲ್ಮಾನ್ ಖಾನ್ ಆರೋಪಮುಕ್ತರಾಗಿದ್ದರು. ಪ್ರಕರಣದ ತೀರ್ಪು ನೀಡಿದ್ದ ಬಾಂಬೆ ಹೈಕೋರ್ಟ್ ಪೊಲೀಸರು ಮಾಡಿದ ಪ್ರಮಾದಗಳನ್ನು ಎತ್ತಿತೋರಿಸಿತ್ತು. ಅಲ್ಲದೆ ತನಿಖೆ ನಡೆಸಿದ್ದ ಮುಂಬೈ ಪೊಲೀಸರನ್ನು ಹೈಕೋರ್ಟ್ ತೀವ್ರ ತರಾಟೆಗೆ ತೆಗೆದುಕೊಂಡಿತ್ತು. ಇದು ಮುಂಬೈ ಪೊಲೀಸರಿಗೆ ತೀವ್ರ ಮುಖಭಂಗ ಉಂಟು ಮಾಡಿತ್ತು.
ಈ ಹಿನ್ನೆಲೆಯಲ್ಲಿ ಪ್ರಕರಣದ ತನಿಖೆಯಲ್ಲಿ ಉಂಟಾಗಿರುವ ಲೋಪ-ದೋಷಗಳನ್ನು ಮುಂಬೈನ ಅಪರಾಧ ವಿಭಾಗದ ಹೆಚ್ಚುವರಿ ಪೊಲೀಸ್ ಆಯುಕ್ತರಾದ ಚಿಕ್ಕಮಗಳೂರು ಮೂಲದ ಕೆ.ಎಂ.ಎಂ.ಪ್ರಸನ್ನ ಪಟ್ಟಿ ಮಾಡಿದ್ದಾರೆ. ಅಲ್ಲದೆ ಈ ಪಟ್ಟಿಯನ್ನು ಎಲ್ಲ ಪೊಲೀಸ್ ಠಾಣೆಗಳಿಗೆ ರವಾನಿಸಿದ್ದು, ಭವಿಷ್ಯದಲ್ಲಿ ಈ ರೀತಿಯ ಲೋಪಗಳಾಗದಂತೆ ಮುನ್ನೆಚ್ಚರಿಕೆ ವಹಿಸುವಂತೆ ಸೂಚನೆ ನೀಡಿದ್ದಾರೆ. ಇದೇ ಮೊದಲ ಬಾರಿಗೆ ಈ ರೀತಿ ಲೋಪ-ದೋಷಗಳನ್ನು ಪಟ್ಟಿ ಮಾಡಿ ಸಾರ್ವಜನಿಕವಾಗಿ ಪ್ರಕಟಿಸಿರುವುದು ಪೊಲೀಸ್ ಇಲಾಖೆಯಲ್ಲಿ ಅಚ್ಚರಿ ಮೂಡಿಸಿದೆ.
ಪ್ರಸನ್ನ ಅವರು ಪಟ್ಟಿ ಮಾಡಿದ ಲೋಪಗಳು ಇಂತಿವೆ.
1. ಸಲ್ಮಾನ್ ಖಾನ್ ಮದ್ಯ ಸೇವಿಸಿದ್ದಾರೆ ಎಂದು ಹೇಳಲಾದ ಸಾಂಟಾಕ್ರೂಜ್‌ನ ರೈನ್ ಬಾರ್‌ನಿಂದ ಬಿಲ್‌ಗಳನ್ನು ಸಂಗ್ರಹಿಸಲಾಗಿತ್ತಾದರೂ, ಕಾನೂನು ಪ್ರಕಾರ ಪ್ರಮಾಣೀಕರಿಸಿಲ್ಲ.
2. ಜೆಡಬ್ಲ್ಯು ಮ್ಯಾರಿಯಟ್ ಹೋಟೆಲ್ ಹಾಗೂ ಪಾರ್ಕಿಂಗ್ ಪ್ಲೇಸ್‌ನಿಂದ ಬಿಲ್ ಸಂಗ್ರಹಿಸಲಾಗಿದ್ದರೂ, ಪಂಚನಾಮೆಯಲ್ಲಿ ದಾಖಲಿಸಿಲ್ಲ.
3. 2002ರ ಸೆ.28ರ ಬೆಳಗ್ಗೆಯೇ ಸಲ್ಮಾನ್ ರಕ್ತ ಪರೀಕ್ಷೆಗೆ ಲಭ್ಯವಿದ್ದರೂ, ಮಧ್ಯಾಹ್ನ ರಕ್ತದ ಮಾದರಿ ಸಂಗ್ರಹಿಸಲಾಗಿದೆ.
4. ಸಂತ್ರಸ್ತೆ ನರೂಲಾ ರಕ್ತದ ಮಾದರಿಯನ್ನು ಭಾಭಾ ಆಸ್ಪತ್ರೆಯಲ್ಲೂ, ಸಲ್ಮಾನ್ ರಕ್ತ ಮಾದರಿಯನ್ನು ಜೆಜೆ ಆಸ್ಪತ್ರೆಯಲ್ಲೂ ಪಡೆಯಲಾಗಿದೆ. ಇದಕ್ಕೆ ವಿವರಣೆಯಿಲ್ಲ.
5. ಸೆ.28ಕ್ಕೆ ರಕ್ತದ ಮಾದರಿ ಪಡೆದಿದ್ದರೂ, ವಿಧಿವಿಜ್ಞಾನ ಪ್ರಯೋಗಾಲಯಕ್ಕೆ ಕಳುಹಿಸಿದ್ದು ಸೆ.30ಕ್ಕೆ.
6. ರಕ್ತದ ಮಾದರಿಯನ್ನು ಯಾರು ಯಾರಿಗೆ ರವಾನಿಸಿದ್ದಾರೆ ಎಂಬುದನ್ನು ಸೂಕ್ತವಾಗಿ ದಾಖಲಿಸಿಲ್ಲ.
7. ರಕ್ತದ ಮಾದರಿಯನ್ನು ಆಸ್ಪತ್ರೆಯಿಂದ ಪೊಲೀಸ್ ಸ್ಟೇಷನ್‌ಗೆ ತೆಗೆದುಕೊಂಡು ಬಂದ ಪೊಲೀಸ್ ಸಿಬ್ಬಂದಿ ಹೆಸರು ನಮೂದಿಸಿಲ್ಲ ಹಾಗೂ ಅವರ ವಿಚಾರಣೆ ನಡೆಸಿಲ್ಲ. 8. ಸಲ್ಮಾನ್ ಖಾನ್ ರಿಂದ 6 ಮಿ.ಲೀ ರಕ್ತ ಪಡೆಯಲಾಗಿದೆ. ಆದರೆ ಲ್ಯಾಬ್‌ಗೆ 4 ಮಿ.ಲೀ ರಕ್ತ ನೀಡಲಾಗಿದೆ.
9. ವಿಧಿವಿಜ್ಞಾನ ಪ್ರಯೋಗಾಲಯದ ವರದಿ ಸ್ವೀಕರಿಸಿದವರ ವಿಚಾರಣೆ ನಡೆಸಿಲ್ಲ.
10 ವೈದ್ಯಕೀಯ ದಾಖಲೆಗಳನ್ನು ಸ್ವೀಕರಿಸುವಾಗ ತನಿಖಾಧಿಕಾರಿಯು ಅವುಗಳನ್ನು ದೃಢೀಕರಿಸಿಲ್ಲ.
11. ಬಾಂಬೆ ನಿಷೇಧ ಕಾಯ್ದೆ ಕಲಂ 66 (ಐ)(ಬಿ) ಅನ್ನು ವಿಧಿಸಲಾಗಿಲ್ಲ.
12. ಎಫ್ಐಆರ್ ಅನ್ನು ಎರಡು ಕಡೆ ತಿದ್ದಲಾಗಿದ್ದು, ಆದರೆ ಅದರೆ ವಿವರಣೆ ನೀಡಿಲ್ಲ.
13. ಸೆಕ್ಷನ್ 161ರ ಅಡಿಯಲ್ಲಿ ಸಾಕ್ಷಿಗಳ ಹೇಳಿಕೆ ದಾಖಲಿಸಿಲ್ಲ.
14. ಸಲ್ಮಾನ್ ಖಾನ್ ವಾಹನ ಚಾಲನೆ ಮಾಡುತ್ತಿದ್ದರು ಎಂದು ಯಾರೂ ಹೇಳಿಲ್ಲ.
15. ಟೈರ್ ಸ್ಫೋಟವಾಗಿದ್ದರಿಂದಲೇ ಅಪಘಾತ ಸಂಭವಿಸಿದೆ ಎಂದು ಪ್ರತಿವಾದಿ ವಕೀಲರು ಹೇಳಿದ್ದಾರೆ. ಆದರೆ ಅವರ ಆರೋಪವನ್ನು ಅಲ್ಲಗಳೆಯಲು ಟೈರ್‌ಗಳನ್ನು ಪೊಲೀಸರು ವಿಧಿವಿಜ್ಞಾನ ಪ್ರಯೋಗಾಲಯಕ್ಕೆ ಕಳುಹಿಸಿಲ್ಲ.
16. ನಟ ಕಮಲ್ ಖಾನ್‌ರ ವಿಳಾಸ ಪೊಲೀಸರ ಬಳಿ ಲಭ್ಯವಿದ್ದರೂ ಅವರ ವಿಚಾರಣೆ ನಡೆಸಿಲ್ಲ. ಪೊಲೀಸರಿಗೆ ಇವರು ಪ್ರಮುಖ ಸಾಕ್ಷಿಯಾಗಿದ್ದರು.
ಸುಪ್ರೀಂ ಮೇಲ್ಮನವಿಗೆ ನಿರ್ಧಾರ..!
ಸದ್ಯ ಹೈಕೋರ್ಟ್ ತೀರ್ಪಿನ ವಿರುದ್ಧ ಸುಪ್ರೀಂಕೋರ್ಟ್‌ಗೆ ಮೇಲ್ಮನವಿ ಸಲ್ಲಿಸಲು ನಿರ್ಧರಿಸಲಾಗಿದೆ.