ದೇಶ

ಸಮಾಜವಾದಿ ಪಕ್ಷದ ನಾಯಕನ ಮೇಲೆ ಗುಂಡಿನ ದಾಳಿ

Lingaraj Badiger
ಕಾನ್ಪುರ: ನಗರದ ರೈಲ್ ಬಜಾರ್ ಪ್ರದೇಶದಲ್ಲಿ ಆಸ್ತಿ ವಿವಾದದ ಹಿನ್ನೆಲೆಯಲ್ಲಿ ಸಮಾಜವಾದಿ ಪಕ್ಷದ ಸ್ಥಳೀಯ ನಾಯಕರೊಬ್ಬರ ಮೇಲೆ ಯುವಕನೊಬ್ಬ ಗುಂಡಿನ ದಾಳಿ ನಡೆಸಿರುವುದಾಗಿ ಗುರುವಾರ ಪೊಲೀಸರು ತಿಳಿಸಿದ್ದಾರೆ.
ಪೊಲೀಸರ ಪ್ರಕಾರ, ಸಮಾಜವಾದಿ ಪಕ್ಷದ ನಾಯಕ ಫೈಸಲ್ ಜಾವೇದ್(40) ಅವರು ಇತ್ತೀಚಿಗಷ್ಟೇ ಒಂದು ವಿವಾದಿತ ನಿವೇಶನವನ್ನು ಖರೀದಿಸಿದ್ದರು. ಆದರೆ ಆ ಪ್ರದೇಶದಲ್ಲಿ ವಾಸಿಸುತ್ತಿದ್ದ ಕಲ್ಲು ಘೋಸಿ ಹಾಗೂ ಆತನ ಕುಟುಂಬ ಈ ನಿವೇಶನವನ್ನು ಆಕ್ರಮಿಸಿಕೊಂಡಿದ್ದರು.
ನಿನ್ನೆ ರಾತ್ರಿ ತಮ್ಮ ಆಪ್ತರೊಂದಿಗೆ ನಿವೇಶನ ತೆರವುಗೊಳಿಸುವಂತೆ ಕೇಳಲು ಕಲ್ಲು ಬಳಿ ಸಮಾಜವಾದಿ ಪಕ್ಷದ ನಾಯಕ ತೆರಳಿದ್ದರು. ಈ ವೇಳೆ ಇಬ್ಬರ ಮಧ್ಯ ತೀವ್ರ ಮಾತಿನ ಚಕಮಕಿ ನಡೆದಿದೆ ಎಂದು ಪೊಲೀಸ್ ವಕ್ತಾರರು ತಿಳಿಸಿದ್ದಾರೆ.
ಈ ವೇಳೆ ಕಲ್ಲು ಪುತ್ರ ಬಧ್ಕ, ಜಾವೇದ್ ಮೇಲೆ ನಾಡ ಪಿಸ್ತೂಲ್‌ನಿಂದ ಎರಡು ಸುತ್ತು ಗುಂಡು ಹಾರಿಸಿದ್ದು, ಒಂದು ಗುಂಡು ಜಾವೇದ್ ಸೊಂಟಕ್ಕೆ ತಗುಲಿದೆ ವೃತ್ತ ಅಧಿಕಾರಿ ಸುಶಿಲ್ ಧುಲೆ ಅವರು ಹೇಳಿದ್ದಾರೆ.
ಗುಂಡಿನಿಂದ ತೀವ್ರವಾಗಿ ಗಾಯಗೊಂಡ ಜಾವೇದ್ ಅವರನ್ನು ಆಸ್ಪತ್ರೆಗೆ ದಾಖಲಿಸಲಾಗಿದ್ದು, ಸಮಾಜವಾದಿ ಪಕ್ಷದ ನಾಯಕನ ಸ್ಥಿತಿ ಗಂಭೀರವಾಗಿದೆ ಎನ್ನಲಾಗಿದೆ.
SCROLL FOR NEXT