ನವದೆಹಲಿ: ಸಾರಿಗೆ ಮತ್ತು ವಾಯುಮಾಲಿನ್ಯ ನಿಯಂತ್ರಣಕ್ಕಾಗಿ ದೆಹಲಿ ಸರ್ಕಾರ ಜಾರಿಗೆ ತಂದಿರುವ ಸಮ-ಬೆಸ ಸಂಖ್ಯೆ ಮಾದರಿ ಯೋಜನೆಯನ್ನು ರದ್ದು ಮಾಡಲು ಸಾಧ್ಯವಿಲ್ಲ. ಯೋಜನೆಗೆ ದೆಹಲಿ ನಗರವಾಸಿಗಳು ಸಹಕರಿಸಲೇ ಬೇಕು ಎಂದು ಗುರುವಾರ ಸುಪ್ರೀಂ ಕೋರ್ಟ್ ಹೇಳಿದೆ.
ದೆಹಲಿ ಸರ್ಕಾರ ಉದ್ದೇಶಿತ ಸಮ-ಬೆಸ ಮಾದರಿ ಯೋಜನೆಯ 15 ದಿನಗಳ ಪ್ರಯೋಗಾರ್ಥ ಜಾರಿ ಪೂರ್ಣಗೊಂಡ ಹೊನ್ನಲೆಯಲ್ಲಿ ಪ್ರಕರಣದ ವಿಚಾರಣೆ ನಡೆಸಿದ ಸುಪ್ರೀಂ ಕೋರ್ಟ್ ನ ನ್ಯಾಯಮೂರ್ತಿ ಟಿಎಸ್ ಠಾಕೂರ್ ಅವರು, ವಾಯುಮಾಲಿನ್ಯದಿಂದ ದೆಹಲಿ ಜನತೆ ಸಾಯುತ್ತಿದ್ದಾರೆ. ಮಾಲಿನ್ಯ ನಿಯಂತ್ರಣಕ್ಕಾಗಿ ದೆಹಲಿ ಸರ್ಕಾರ ಕ್ರಮ ಕೈಗೊಂಡಿದೆ. ಸರ್ಕಾರದ ಯೋಜನೆಗೆ ಎಲ್ಲರೂ ಸಹಕರಿಸಲೇಬೇತು ಎಂದು ಹೇಳಿದರು.
ಕಾರ್ ಪೂಲಿಂಗ್ ಗೆ ಒತ್ತು ನೀಡಿದ ನ್ಯಾಯಮೂರ್ತಿ
ಇದೇ ವೇಳೆ ಪರಸ್ಪರ ಸಹಾಯದಿಂದಲೂ ವಾಯುಮಾಲಿನ್ಯಕ್ಕೆ ಕಡಿವಾಣ ಹಾಕಬಹುದು ಎಂದ ನ್ಯಾಯಮೂರ್ತಿ ಠಾಕೂರ್ ಅವರು, ಕಾರ್ ಪೂಲಿಂಗ್ ವ್ಯವಸ್ಥೆಯಿಂದಾಗಿ ಪರಸ್ಪರರಿಗೆ ನೆರವಾಗಬಹುದು. ನಾನು ಕೂಡ ಕಾರ್ ಪೂಲಿಂಗ್ ನಲ್ಲಿ ತೊಡಗಿದ್ದೇನೆ ಎಂದು ಹೇಳಿದರು.
ದೆಹಲಿ ವಾಯುಮಾಲಿನ್ಯ ಮತ್ತು ಸಾರಿಗೆ ಅವ್ಯವಸ್ಥೆ ತಡೆಗೆ ದೆಹಲಿ ಸರ್ಕಾರ ಕಳೆದ ಜನವರಿ 1ರಂದು ಜಾರಿಗೆ ತಂದಿದ್ದ ಸಮ-ಬೆಸ ಸಂಖ್ಯೆ ಪ್ರಯೋಗಾರ್ಥ 15 ದಿನಗಳ ಯೋಜನೆ ನಾಳೆ ಅಂತ್ಯಗೊಳ್ಳಲಿದ್ದು, ಯೋಜನೆಯನ್ನು ಮುಂದುವರೆಸಲು ಅನುಮತಿ ಕೋರಿ ದೆಹಲಿ ಸರ್ಕಾರ ನ್ಯಾಯಾಲಯದಲ್ಲಿ ಅರ್ಜಿ ಸಲ್ಲಿಸಿತ್ತು. ದೆಹಲಿ ನ್ಯಾಯಾಲಯ ಕೂಡ ಈ ಹಿಂದೆ ಯೋಜನೆಯನ್ನು ಸ್ಥಗಿತಗೊಳಿಸಬಹುದಲ್ಲವೇ ಎಂದು ದೆಹಲಿ ಸರ್ಕಾರವನ್ನು ಪ್ರಶ್ನಿಸಿತ್ತು.
ಜನವರಿ 1ರಂದು ಸಮ-ಬೆಸ ಸಂಖ್ಯೆ ಮಾದರಿ ಯೋಜನೆ ಜಾರಿಯಾದ ಬಳಿಕ ದೆಹಲಿಯಲ್ಲಿ ವಾಯುಮಾಲಿನ್ಯ ಪ್ರಮಾಣ ಗಣನೀಯವಾಗಿ ಇಳಿಕೆಯಾಗಿತ್ತು.