ಸಿಕ್ಕಿಂ: ಈಶಾನ್ಯ ಭಾರತದ ಪುಟ್ಟ ರಾಜ್ಯ ಸಿಕ್ಕಿಂ ದೇಶದ ಮೊದಲ `ಸಾವಯವ ರಾಜ್ಯ' ಎಂಬ ಹೆಗ್ಗಳಿಕೆಗೆ ಪಾತ್ರವಾಗಿದೆ.
75 ಸಾವಿರ ಹೆಕ್ಟೇರ್ ಪ್ರದೇಶದಲ್ಲಿ ಸುಸ್ಥಿರ ಕೃಷಿ ಕೈಗೊಂಡು ಈ ಸಾಧನೆ ಮಾಡಿದೆ. ಪವನ್ ಚಾಮ್ಲಿಂಗ್ ನೇತೃತ್ವದ ಸರ್ಕಾರ 2003ರಲ್ಲಿ ಸಿಕ್ಕಿಂ ಅನ್ನು ಸಂಪೂರ್ಣ ಸಾವಯವ ಕೃಷಿ ರಾಜ್ಯವಾಗಿ ಮಾಡುವ ಸಂಕಲ್ಪ ತೊಟ್ಟಿತ್ತು. ಹೀಗಾಗಿ, ರಾಸಾಯನಿಕಗಳನ್ನು ನಿಷೇಧಿಸಲಾಯಿತು. ಸಾವಯವ ಪರಿಕರಗಳ ಬಳಕೆ ಹೆಚ್ಚಿತು. ಪರಿಣಾಮ, ಸಿಕ್ಕಿಂ ಇಂದು ಸಾವಯವ ಕೃಷಿ ರಾಜ್ಯವಾಗಿ ರೂಪಾಂತರಗೊಂಡಿದೆ.
``ಈ ಮಾದರಿ ವ್ಯವಸಾಯವನ್ನು ಆದಾಯದ ಮೂಲವಾಗಿಸಿದೆ. ಜೈವಿಕ ವೈವಿಧ್ಯತೆ, ಮಣ್ಣಿನ ಫಲವತ್ತತೆ, ಮತ್ತು ಪರಿಸರ ರಕ್ಷಣೆ ಸಾಧ್ಯವಾಗಿದೆ. ಸಾವಯವ ಕೃಷಿಯಿಂದ ಉತ್ಪಾದನೆಯೂ ಹೆಚ್ಚಿದೆ.
ಜೈವಿಕ ಗೊಬ್ಬರ ಮತ್ತು ಕೀಟನಾಶಕಗಳ ಬಗ್ಗೆ ರೈತರಿಗೆ ಸರ್ಕಾರ ಜಾಗೃತಿ ನೀಡಿದೆ. ಜತೆಗೆ ಮಜಿತರ್ ನಲ್ಲಿ ಜೈವಿಕ ಗೊಬ್ಬರ ಕಾರ್ಖಾನೆ ಆರಂಭಿಸಿ ಗೊಬ್ಬರ, ಕೀಟನಾಶಕ ಪೂರೈಸಲಾಗುತ್ತದೆ ಎಂದು ಕೃಷಿ ಇಲಾಖೆ ನಿರ್ದೇಶಕ ಕರೋಲಾ ಬುಟಿಯಾ ತಿಳಿಸಿದ್ದಾರೆ. ಪ್ರಸ್ತುತ, ಸುಸ್ಥಿರ ಕೃಷಿ ಮೂಲಕ ಸಿಕ್ಕಿಂ 1.24 ದಶಲಕ್ಷ ಟನ್ ಸಾವಯವ ಕೃಷಿ ಉತ್ಪನ್ನವನ್ನು ಉತ್ಪಾದಿಸುತ್ತಿದೆ.
ಪ್ರವಾಸೋದ್ಯಮ ಅಭಿವೃದ್ಧಿ: ಹೇಳಿ ಕೇಳಿ ಸಿಕ್ಕಿಂ ಹಿಮಾಲಯದ ತಪ್ಪಲನಾಡು. ಇಲ್ಲಿಗೆ ಪ್ರವಾಸಿಗರು ಹೆಚ್ಚು. ರೆಸಾರ್ಟ್, ಹೊಟೆಲ್ ಗಳಲ್ಲಿ `ಸಾವಯವ ಕೃಷಿ ಆಹಾರ ಲಭ್ಯ' ಎಂಬ ಬೋರ್ಡ್ಗಳು ನೇತು ಬಿದ್ದಿವೆ. ಹೀಗಾಗಿ ವ್ಯಾಪಾರವೂ ಜೋರಾಗಿದೆ.