ನವದೆಹಲಿ: ಪಠಾಣ್‌ಕೋಟ್ ದಾಳಿಗೆ ಸಂಬಂಧಿಸಿದಂತೆ ಉಗ್ರರ ವಿರುದ್ಧ ಯಾವುದೇ ಕ್ರಮ ತೆಗೆದುಕೊಳ್ಳದ ಪಾಕಿಸ್ತಾನದ ಬಗ್ಗೆ ತೀವ್ರ ಅಸಮಾಧಾನ ವ್ಯಕ್ತಪಡಿಸಿರುವ ರಕ್ಷಣಾ ಸಚಿವ ಮನೋಹರ್ ಪರಿಕ್ಕರ್ ಅವರು, ಭಾರತದ ತಾಳ್ಮೆಗೂ ಒಂದು ಮೀತಿ ಇದ್ದು, ಮುಂದಿನ ವರ್ಷಗಳಲ್ಲಿ ಅದರ ಫಲಿತಾಂಶವನ್ನು ಜಗತ್ತು ನೋಡಲಿದೆ ಎಂದಿದ್ದಾರೆ.
ಇದೇ ವೇಳೆ ಪಠಾಣ್‌ಕೋಟ್ ದಾಳಿಯ ತನಿಖೆ ನಡೆಸುತ್ತಿರುವ ಪಾಕಿಸ್ತಾನ ತಂಡಕ್ಕೆ ಪಠಾಣ್‌ಕೋಟ್ ವಾಯುನೆಲೆ ಪ್ರವೇಶಿಸಲು ಅವಕಾಶ ನೀಡುವುದಿಲ್ಲ ಎಂದು ರಕ್ಷಣಾ ಸಚಿವರು ಹೇಳಿದ್ದಾರೆ.
ಪಠಾಣ್‌ಕೋಟ್ ದಾಳಿಯಲ್ಲಿ ಪಾಕ್ ಉಗ್ರರ ಕೈವಾಡ ಇದೆ ಎಂಬುದರ ಬಗ್ಗೆ ಭಾರತ ಬಲವಾದ ಸಾಕ್ಷ್ಯಗಳನ್ನು ನೀಡಿದ ನಂತರ ಪಾಕ್ ಪ್ರಧಾನಿ ನವಾಜ್ ಷರೀಫ್ ಅವರು ಒಂದು ಉನ್ನತ ಮಟ್ಟದ ಜಂಟಿ ತನಿಖಾ ತಂಡವನ್ನು ರಚಿಸಿದ್ದಾರೆ. ಈ ತಂಡದಲ್ಲಿ ಗುಪ್ತಚರ ಇಲಾಖೆ ಅಧಿಕಾರಿಗಳು, ಐಎಸ್‌ಐ ಮತ್ತು ಸೇನಾ ಅಧಿಕಾರಿಗಳಿದ್ದಾರೆ.
ಜೈಷ್-ಇ-ಮೊಹಮ್ಮದ್ ಉಗ್ರ ಸಂಘಟನೆಯ ಉಗ್ರರು ಕಳೆದ ಜನವರಿ 2ರಂದು ಪಠಾಣ್‌ಕೋಟ್ ವಾಯುನೆಲೆ ಮೇಲೆ ದಾಳಿ ನಡೆಸಿದ್ದರು. ಈ ದಾಳಿಯಲ್ಲಿ ಏಳು ಭಾರತೀಯ ಯೋಧರು ಹುತಾತ್ಮರಾಗಿದ್ದರು.