ದೇಶ

ಭಾರತ- ಪಾಕ್ ಆಯಕಟ್ಟಿನ ಗಡಿ ಪ್ರದೇಶಗಳಲ್ಲಿ ಲೇಸರ್ ವಾಲ್ ನಿರ್ಮಾಣಕ್ಕೆ ಕೇಂದ್ರದ ಕ್ರಮ

Srinivas Rao BV

ನವದೆಹಲಿ: ಪಠಾಣ್ ಕೋಟ್ ದಾಳಿ ನಂತರ ಭಾರತ-ಪಾಕ್ ಅಂತಾರಾಷ್ಟ್ರೀಯ ಗಡಿ ಉಲ್ಲಂಘನೆಯಾಗದಂತೆ ಎಚ್ಚರಿಕೆ ವಹಿಸಲು ಕೇಂದ್ರ ಸರ್ಕಾರ ಮತ್ತಷ್ಟು ಪರಿಣಾಮಕಾರಿ ಕ್ರಮ ಕೈಗೊಳ್ಳಲು ಮುಂದಾಗಿದೆ.

ಭಾರತ-ಪಾಕಿಸ್ತಾನದ 40 ಕ್ಕೂ ಹೆಚ್ಚು ಸೂಕ್ಷ್ಮ ಗಡಿ ಪ್ರದೇಶಗಳಿಗೆ ಲೇಸರ್ ವಾಲ್ ಅಳವಡಿಕೆ ಮಾಡುವ ಮೂಲಕ ಗಡಿ ಉಲ್ಲಂಘನೆಯಾಗದಂತೆ ಎಚ್ಚರ ವಹಿಸಲು ಕೇಂದ್ರ ಗೃಹ ಸಚಿವಾಲಯ ಮುಂದಾಗಿದೆ. ಪಂಜಾಬ್ ಬಳಿಯಿರುವ ಎಲ್ಲಾ ನದಿ ಪ್ರದೇಶಗಳ ಗಡಿಗಳಿಗೂ ಲೇಸರ್ ವಾಲ್ ಅಳವಡಿಕೆ ಮಾಡಲು ನಿರ್ಧರಿಸಲಾಗಿದೆ. ಲೇಸರ್ ವಾಲ್ ತಂತ್ರಜ್ಞಾನವನ್ನು ಬಿಎಸ್ಎಫ್ ಅಭಿವೃದ್ಧಿ ಪಡಿಸಿದ್ದು, ಯಾವುದೇ ವ್ಯಕ್ತಿ ಪಾಕಿಸ್ತಾನದಿಂದ ಭಾರತಕ್ಕೆ ನುಸುಳುವುದನ್ನು ಸಮರ್ಥವಾಗಿ ತಡೆಯುವ ಸಾಮರ್ಥ್ಯ ಹೊಂದಿದೆ.

ಲೇಸರ್ ನೊಂದಿಗೆ ಅಳವಡಿಸಲಾಗಿರುವ ಡಿಟೆಕ್ಟರ್ ಗಡಿ ಪ್ರದೇಶದಲ್ಲಿ ಯಾವುದೇ ವ್ಯಕ್ತಿ/ ವಸ್ತು ಪ್ರವೇಶ ಮಾಡುವುದನ್ನ ಗುರುತಿಸುತ್ತದೆ, ಅಕ್ರಮ ಪ್ರವೇಶವಾದ(ಗಡಿ ಉಲ್ಲಂಘನೆಯಾದ) ಬೆನ್ನಲ್ಲೇ ಸೈರನ್ ಶಬ್ದ ಕೇಳಿಸುತ್ತದೆ. ಪ್ರಸ್ತುತ ಈ ವ್ಯವಸ್ಥೆ 40 ಸೂಕ್ಷ್ಮ ಗಡಿ ಪ್ರದೇಶಗಳ ಪೈಕಿ ಕೇವಲ 5 -6 ಪ್ರದೇಶಗಳಲ್ಲಿ ಮಾತ್ರ ಅಸ್ತಿತ್ವದಲ್ಲಿದೆ.

ಪಂಜಾಬ್ ಪ್ರಾಂತ್ಯದ ಒಮಿಯಾಲ್‌ನಲ್ಲಿರುವ ಉಜ್ ನದಿಯ ಕಿನಾರೆಯ ಮೂಲಕ ಪಠಾಣ್ ಕೋಟ್ ವಾಯುನೆಲೆ ಮೇಲೆ ದಾಳಿ ನಡೆಸಿದ್ದ  ಜೈಶ್- ಇ- ಮೊಹಮ್ಮದ್ ಉಗ್ರ ಸಂಘಟನೆ ಭಯೋತ್ಪಾದಕರು ಭಾರತದೊಳಗೆ ಪ್ರವೇಶಿಸಿದ್ದಾರೆ ಎಂದು ಶಂಕಿಸಲಾಗಿದೆ. 130ಮೀಟರ್ ಅಗಲದ ಉಜ್ ನದಿ ಕಿನಾರೆಯಲ್ಲಿ ಉಗ್ರರ ಚಲನ-ವಲನ ಪತ್ತೆಗೆ ಅಳವಡಿಸಲಾಗಿರುವ ಕ್ಯಾಮೆರಾ ಯಾವುದೇ ಚಿತ್ರೀಕರಣ ಮಾಡದೆ ಸ್ತಬ್ಧವಾಗಿರುವುದೂ ಬೆಳಕಿಗೆ ಬಂದಿದೆ. 

SCROLL FOR NEXT