ದೇಶ

ಹೈದರಾಬಾದ್ ವಿವಿ ಭೇಟಿ ನೀಡಲಿರುವ ರಾಹುಲ್ ಗಾಂಧಿ

Rashmi Kasaragodu
ನವದೆಹಲಿ: ಹೈದರಾಬಾದ್ ನಲ್ಲಿ  ಸಂಶೋಧನಾ ವಿದ್ಯಾರ್ಥಿ ರೋಹಿತ್ ವೇಮುಲಾ ಆತ್ಮಹತ್ಯೆಗೆ ಶರಣಾಗಿರುವುದಕ್ಕೆ ಕೇಂದ್ರ ಕಾರ್ಮಿಕ ಸಚಿವ ಬಂಡಾರು ದತ್ತಾತ್ರೇಯ ಮತ್ತು ವಿಶ್ವ ವಿದ್ಯಾನಿಲಯದ ಉಪ ಕುಲಪತಿಯವರೇ ಕಾರಣ ಎಂದು ಆರೋಪಿಸಿ ಹೈದರಾಬಾದ್ ವಿಶ್ವವಿದ್ಯಾನಿಲಯದಲ್ಲಿ ವಿದ್ಯಾರ್ಥಿಗಳು ಪ್ರತಿಭಟನೆ ನಡೆಸುತ್ತಿದ್ದಾರೆ.
ಈ ಹಿನ್ನಲೆಯಲ್ಲಿ ಕಾಂಗ್ರೆಸ್ ಉಪಾಧ್ಯಕ್ಷ ರಾಹುಲ್ ಗಾಂಧಿ, ಪಕ್ಷದ ಕಾರ್ಯದರ್ಶಿ ದಿಗ್ವಿಜಯ್ ಸಿಂಗ್ ಜತೆಗೆ ವಿಶ್ವವಿದ್ಯಾನಿಲಯಕ್ಕೆ ಭೇಟಿ ನೀಡಲಿದ್ದಾರೆ ಎಂದು ಪಕ್ಷದ ಮೂಲಗಳು ಹೇಳಿವೆ.
ದಲಿತ ವಿದ್ಯಾರ್ಥಿಗಳ ಬಗ್ಗೆ ತಾರತಮ್ಯ ತೋರಿರುವು ದತ್ತಾತ್ರೇಯ ಅವರು ಮಾನವ ಸಂಪನ್ಮೂಲ ಇಲಾಖೆ ಸಚಿವೆ ಸ್ಮೃತಿ ಇರಾನಿ ಅವರಿಗೆ ಪತ್ರ ಬರೆದು ದಲಿತ ವಿದ್ಯಾರ್ಥಿಗಳು ದೇಶದ್ರೋಹದ ಕೆಲಸ ಮಾಡುತ್ತಿದ್ದಾರೆ ಎಂದು ಹೇಳಿದ್ದರು. ಈ ಕಾರಣದಿಂದಾಗಿ ರೋಹಿತ್ ವೇಮುಲಾ  ಸೇರಿದಂತೆ ಇತರ ಐವರು ಸಂಶೋಧನಾ ವಿದ್ಯಾರ್ಥಿಗಳನ್ನು  ಹೈದ್ರಾಬಾದ್ ಸೆಂಟ್ರಲ್ ಯುನಿವರ್ಸಿಟಿ ವಜಾಗೊಳಿಸಿತ್ತು. ಕಳೆದ ವರ್ಷ ಆಗಸ್ಟ್ ತಿಂಗಳಿನಲ್ಲಿ ಈ  ಘಟನೆ ನಡೆದಿತ್ತು. ವಜಾಗೊಳಿಸಿದ ವಿದ್ಯಾರ್ಥಿಗಳನ್ನು ವಿದ್ಯಾರ್ಥಿ ನಿಲಯದಿಂದಲೂ ಉಚ್ಛಾಟಿಸಿದ್ದು, ಈ ವಿದ್ಯಾರ್ಥಿಗಳು ಹೊರಗೆ ಟೆಂಟ್ ಹಾಕಿ ವಾಸವಾಗಿದ್ದರು.
ರೋಹಿತ್ ಆತ್ಮಹತ್ಯೆ ಬಗ್ಗೆ ಪ್ರತಿಕ್ರಿಯಿಸಿದ ಕಾಂಗ್ರೆಸ್, ಬಿಜೆಪಿಯ ದಲಿತ ವಿರೋಧಿ ಧೋರಣೆಯಿಂದಾಗಿಯೇ ಸಂಶೋಧನಾ ವಿದ್ಯಾರ್ಥಿ ಆತ್ಮಹತ್ಯೆಗೆ ಶರಣಾಗಿದ್ದಾನೆ ಎಂದು ಆರೋಪಿಸಿದೆ.
SCROLL FOR NEXT