ಪಣಜಿ: ಪೋರ್ಚುಗಲ್ ನ ಪ್ರಧಾನಿ ಆಂಟೋನಿಯೊ ಕೋಸ್ಟಾ ಗೋವಾಗೆ ಆಗಮಿಸುತ್ತಿದ್ದು, ಅವರನ್ನು ಸ್ವಾಗತಿಸಲು ಮುಂದಾಗಿರುವ ಗೋವಾ ಬಿಜೆಪಿ ಸರ್ಕಾರದ ನಡೆಗೆ ಆರ್ ಎಸ್ಎಸ್ ನಿಂದ ವಿರೋಧ ವ್ಯಕ್ತವಾಗಿದೆ. ವಿರೋಧದ ನಡುವೆಯೂ ಪೋರ್ಚುಗಲ್ ಪ್ರಧಾನಿ ಆಗಮನಕ್ಕೆ ಆರ್ ಎಸ್ಎಸ್ ಷರತ್ತು ಬದ್ಧ ಒಪ್ಪಿಗೆ ಸೂಚಿಸಿದೆ.
ಗೋವಾದಲ್ಲಿ 450 ವರ್ಷಗಳ ಕಾಲ ಪೋರ್ಚುಗಲ್ ನವರು ನಡೆಸಿದ ದಬ್ಬಾಳಿಕೆಯ ಆಡಳಿತಕ್ಕೆ ಆಂಟೋನಿಯೊ ಕೋಸ್ಟಾ ಕ್ಷಮೆ ಕೋರಿದರೆ ಮಾತ್ರ, ಅವರು ಗೋವಾದ ನೆಲದಲ್ಲಿ ಸ್ವಾಗತ ಸ್ವೀಕರಿಸಬಹುದು ಎಂದು ಆರ್ ಎಸ್ಎಸ್ ನ ಗೋವಾ ಮುಖಂಡ ಸುಭಾಷ್ ವೆಲಿಂಗ್ಕರ್ ಹೇಳಿದ್ದಾರೆ.
ದಕ್ಷಿಣ ಗೋವಾದ ಮಾರ್ಗೋವಾ ನಗರದ ಹಿನ್ನೆಲೆ ಹೊಂದಿರುವ ಪೋರ್ಚುಗಲ್ ನ ಪ್ರಧಾನಿ ಆಂಟೋನಿಯೊ ಕೋಸ್ಟಾ ಅವರಿಗೆ ಅಭಿನಂದನೆ ಸಲ್ಲಿಸಲು ಜ.15 ರಂದು ಗೋವಾ ವಿಧಾನಸಭೆಯಲ್ಲಿ ನಿರ್ಣಯ ಕೈಗೊಳ್ಳಲಾಗಿತ್ತು. ಸದ್ಯದಲ್ಲೇ ಗೋವಾ ಸರ್ಕಾರ ಪೋರ್ಚುಗಲ್ ಪ್ರಧಾನಿ ಕೋಸ್ಟಾ ಅವರನ್ನು ಆಹ್ವಾನಿಸುವುದಾಗಿ ಗೋವಾ ಮುಖ್ಯಮಂತ್ರಿ ಲಕ್ಷ್ಮಿಕಾಂತ್ ಪರ್ಸೇಕರ್ ಹೇಳಿದ್ದರು.
ಪೋರ್ಚುಗೀಸರು ಗೋವಾದ ಮೇಲೆ ದಬ್ಬಾಳಿಕೆ ನಡೆಸಿ ಉಂಟುಮಾಡಿರುವ ವಿನಾಶ ಅಕ್ಷಮ್ಯ ಅಪರಾಧವಾಗಿದೆ. ಗೋವಾಗೆ ಬುರುವುದಿದ್ದರೆ ಪೋರ್ಚುಗಲ್ ನ ಪ್ರಧಾನಿ ಪೋರ್ಚುಗೀಸರ ಪಾಪಗಳಿಗೆ ಕ್ಷಮೆ ಕೋರಬೇಕು ಎಂದು ಸುಭಾಷ್ ವೆಲಿಂಗ್ಕರ್ ಹೇಳಿದ್ದಾರೆ.