ದೇಶ

ಜೆಎಂಐ, ಅಲೀಘರ್ ಮುಸ್ಲಿಂ ವಿವಿ ಅಲ್ಪಸಂಖ್ಯಾತ ಸ್ಥಾನಮಾನ ಕಳಚುವುದಕ್ಕೆ ಕಾಂಗ್ರೆಸ್, ಟಿಎಂಸಿ ಸಿಪಿಐ ವಿರೋಧ

Srinivas Rao BV

ನವದೆಹಲಿ: ಅಲೀಘರ್ ಮುಸ್ಲಿಂ ವಿಶ್ವವಿದ್ಯಾನಿಲಯ ಹಾಗೂ ಜಾಮಿಯಾ ಮಿಲಿಯಾ ಇಸ್ಲಾಮಿಯಾ ವಿಶ್ವವಿದ್ಯಾನಿಲಯಗಳನ್ನು ಅಲ್ಪಸಂಖ್ಯಾತ ಸ್ಥಾನಮಾನದಿಂದ ಕೈಬಿಡುವುದಕ್ಕೆ ಕಾಂಗ್ರೆಸ್, ತೃಣಮೂಲ ಕಾಂಗ್ರೆಸ್, ಎಡಪಕ್ಷಗಳು ಸೇರಿದಂತೆ ಒಟ್ಟು ಎಂಟು ಪಕ್ಷಗಳು ತೀವ್ರ ವಿರೋಧ ವ್ಯಕ್ತಪಡಿಸಿವೆ.
ಅಲ್ಪಸಂಖ್ಯಾತ ಸ್ಥಾನಮಾನದಿಂದ ಈ ಎರಡು ವಿಶ್ವವಿದ್ಯಾನಿಲಯಗಳನ್ನು ಹೊರಗಿಡುವ ವಿಷಯಕ್ಕೆ ಸಂಬಂಧಿಸಿದಂತೆ ಅಟಾರ್ನಿ ಜನರಲ್ ಮುಕುಲ್ ರೋಹಟಗಿ ಅವರನ್ನು ತರಾಟೆಗೆ ತೆಗೆದುಕೊಂಡಿವೆ. ಒಂದು ವೇಳೆ ವಿರೋಧದ ನಡುವೆಯೂ ಕೇಂದ್ರ ಸರ್ಕಾರ ತನ್ನ ನಿರ್ಧಾರವನ್ನು ಅನುಷ್ಠಾನಕ್ಕೆ ತರಲು ಮುಂದಾದರೆ ಅದನ್ನು ವಿರೋಧಿಸಿ ರಾಷ್ಟ್ರಪತಿಗಳಿಗೆ ಪತ್ರ ಬರೆಯುವುದು, ಸಹಿ ಸಂಗ್ರಹ ಅಭಿಯಾನ ಹಮ್ಮಿಕೊಳ್ಳುವುದೂ ಅಲ್ಲದೇ ಸಂಸತ್ ನ ಬಜೆಟ್ ಅಧಿವೇಶನದಲ್ಲಿ ಈ ವಿಷಯವನ್ನು ಪ್ರಶ್ನಿಸುವುದಾಗಿ ಎಚ್ಚರಿಸಿವೆ.
ಜೆಎಂಐ, ಅಲೀಘರ್ ಮುಸ್ಲಿಂ ವಿವಿಯ ಅಲ್ಪಸಂಖ್ಯಾತ ಸ್ಥಾನಮಾನವನ್ನು ತೆಗೆದುಹಾಕುವ ಕೇಂದ್ರ ಸರ್ಕಾರದ ನಿರ್ಧಾರವನ್ನು ಖಂಡಿಸುತ್ತೇವೆ ಎಂದು ಕಾಂಗ್ರೆಸ್, ತೃಣಮೂಲ ಕಾಂಗ್ರೆಸ್, ಜೆಡಿ(ಯು), ಆರ್ ಜೆಡಿ, ಎನ್ ಸಿಪಿ, ಸಿಪಿಐ, ಆಪ್ ಸಂಸದರು ಜಂಟಿ ಹೇಳಿಕೆ ಬಿಡುಗಡೆ ಮಾಡಿದ್ದು, ಈ ಎರಡು ವಿಶ್ವವಿದ್ಯಾನಿಲಯಗಳು ಅಲ್ಪಸಂಖ್ಯಾತ ಸಂಸ್ಥೆಗಳೇ ಅಲ್ಲ ಎಂದು ಹೇಳಿರುವ ಮುಕುಲ್ ರೋಹಟಗಿ ವಿರುದ್ಧ ಆಕ್ರೋಶ ವ್ಯಕ್ತಪಡಿಸಿವೆ.
ದೆಹಲಿಯ ಜಾಮಿಯಾ ಮಿಲಿಯಾ ಇಸ್ಲಾಮಿಯಾ( ಜೆಎಂಐ) ವಿಶ್ವವಿದ್ಯಾನಿಲಯ ಹಾಗೂ ಅಲೀಘರ್ ವಿಶ್ವವಿದ್ಯಾನಿಲಯ ಸಂಸತ್ತಿನ ಕಾಯಿದೆ ಮೂಲಕ ಸ್ಥಾಪಿತವಾದ ವಿಶ್ವವಿದ್ಯಾನಿಲಯಗಳಾಗಿವೆ. ಅಲೀಘರ್ ವಿಶ್ವವಿದ್ಯಾನಿಲಯವನ್ನು ಎಂದಿಗೂ ಅಲ್ಪಸಂಖ್ಯಾತ ಸಂಸ್ಥೆ ಎಂದು ಗುರುತಿಸಲಾಗಿಲ್ಲ ಎಂದು ಮುಕುಲ್ ರೋಹಟಗಿ ಸುಪ್ರೀಂ ಕೋರ್ಟ್ ಗೆ ತಿಳಿಸಿದ್ದರು.
ಮಾನವ ಸಂಪನ್ಮೂಲ ಇಲಾಖೆಗೂ ತಮ್ಮ ಅಭಿಪ್ರಾಯವನ್ನು ತಿಳಿಸಿರುವ ಮುಕುಲ್ ರೋಹಟಗಿ, 1967 ರ ಸುಪ್ರೀಂ ಕೋರ್ಟ್ ನ ತೀರ್ಪನ್ನು ಉಲ್ಲೇಖಿಸಿದ್ದು ಅಲೀಘರ್ ಮುಸ್ಲಿಂ ವಿಶ್ವವಿದ್ಯಾನಿಲಯ (ಎಎಂಯು)  ತಾಂತ್ರಿಕವಾಗಿ ಅಲ್ಪಸಂಖ್ಯಾತ ವಿಶ್ವವಿದ್ಯಾನಿಲಯ ಎಂದು ಪರಿಗಣಿಸಲಾಗಿಲ್ಲ ಎಂದು ಹೇಳಿರುವುದನ್ನು ಉಲ್ಲೇಖಿಸಿದ್ದಾರೆ. ಅಲ್ಲದೆ ಇದೇ ತತ್ವ ಜೆಎಂಐ ವಿವಿಗೂ ಅನ್ವಯವಾಗಲಿದೆ ಎಂದು ಮುಕುಲ್ ರೋಹಟಗಿ ವಾದಿಸಿದ್ದಾರೆ.

SCROLL FOR NEXT