ನವದೆಹಲಿ: ಪ್ರಧಾನಿ ನರೇಂದ್ರ ಮೋದಿ, ಬಿಹಾರ ಸಿಎಂ ನಿತೀಶ್ ಕುಮಾರ್ ಗೆ ಚುನಾವಣಾ ಪ್ರಚಾರ ಕಾರ್ಯತಂತ್ರ ರೂಪಿಸಿದ್ದ ಪ್ರಶಾಂತ್ ಕಿಶೋರ್ ಈಗ ಕಾಂಗ್ರೆಸ್ ನ ಅಮರಿಂದರ್ ಸಿಂಗ್ ಗೆ ಚುನಾವಣಾ ಪ್ರಚಾರ ಕಾರ್ಯತಂತ್ರ ರೂಪಿಸಲಿದ್ದಾರೆ.
ಪಂಜಾಬ್ ನಲ್ಲಿ 2017 ಕ್ಕೆ ವಿಧಾನಸಭಾ ಚುನಾವಣೆ ನಡೆಯಲಿದ್ದು, ಅಮರಿಂದರ್ ಸಿಂಗ್ ಕಾಂಗ್ರೆಸ್ ಪಕ್ಷದಿಂದ ಸ್ಪರ್ಧಿಸುತ್ತಿದ್ದಾರೆ. ಈಗಾಗಲೇ ಪ್ರಶಾಂತ್ ಕಿಶೋರ್ ಅವರ ತಂಡ ಪಂಜಾಬ್ ಗೆ ಭೇಟಿ ನೀಡಿ ಮೊದಲ ಹಂತದ ಸಮೀಕ್ಷೆ ನಡೆಸಿದೆ. ಪ್ರಶಾಂತ್ ಕಿಶೋರ್ ತಂಡ ಮಾರ್ಚ್ ವೇಳೆಗೆ ಚುನಾವಣಾ ಪ್ರಚಾರಕ್ಕೆ ಸಂಬಂಧಿಸಿದಂತೆ ಕೆಲಸ ಪ್ರಾರಂಭಿಸಲಿದೆ ಎಂದು ಕಾಂಗ್ರೆಸ್ ವಿಶ್ವಾಸ ವ್ಯಕ್ತಪಡಿಸಿದೆ.
ಅಮರಿಂದರ್ ಸಿಂಗ್ ಪರ ಪ್ರಚಾರ ಕಾರ್ಯತಂತ್ರ ರೂಪಿಸುವುದಕ್ಕೆ ಪ್ರಶಾಂತ್ ಕಿಶೋರ್ ಹಣ ಪಡೆಯುತ್ತಿಲ್ಲ ಆದ್ದರಿಂದ ಅವರಿಗೆ ನೀಡಲಾಗಿರುವ ಬಿಹಾರ ಸಿಎಂ ಸಲಹೆಗಾರರ ಹುದ್ದೆಗೂ ಯಾವುದೇ ಸಮಸ್ಯೆಯುಂಟಾಗುವುದಿಲ್ಲ ಎಂದು ಹೇಳಲಾಗಿದೆ.