ದೇಶ

ಜಾತ್ಯತೀತ ಪದಕ್ಕೆ ಕಳಂಕ: ಮುಂದೆ ಸ್ವಾತಂತ್ರ್ಯದ ಸರದಿ

Mainashree

ಕೋಲ್ಕತಾ: ಕೋಮಿನ ಆಧಾರದಲ್ಲಿ ಇಂದು ಭಾರತೀಯ ಸಮಾಜವನ್ನು ಒಡೆಯಲಾಗುತ್ತಿದೆ. ಈ ಸನ್ನಿವೇಶದಲ್ಲಿ ಸೆಕ್ಯುಲರಿಸಮ್(ಜಾತ್ಯತೀತತೆ) ಎಂಬ ಪದವೇ ಕಳಂಕ ಎಂಬಂತಾಗಿದೆ. ಮುಂದಿನ ಸರದಿ ಪ್ರಜಾಪ್ರಭುತ್ವ ಮತ್ತು ಸ್ವಾತಂತ್ರ್ಯ ಎಂಬ ಪದಗಳದ್ದಾಗಲಿದೆ ಎಂದು ನೊಬೆಲ್ ಪ್ರಶಸ್ತಿ ಪುರಸ್ಕೃತ ಅರ್ಥಶಾಸ್ತ್ರಜ್ಞ ಅಮರ್ತ್ಯ ಸೇನ್ ಅಭಿಪ್ರಾಯಪಟ್ಟಿದ್ದಾರೆ.

ನೇತಾಜಿ ಸುಭಾಷ್ ಚಂದ್ರ ಬೋಸ್ ಅವರ ಜನ್ಮ ದಿನಾಚರಣೆ ಅಂಗವಾಗಿ ಇಲ್ಲಿನ ನೇತಾಜಿ ಸಂಶೋಧನಾ ಸಂಸ್ಥೆಯಲ್ಲಿ ಆಯೋಜಿಸಿದ್ದ ಸಮಾರಂಭದಲ್ಲಿ ಮಾತನಾಡಿರುವ ಅಮರ್ತ್ಯ ಸೇನ್, ಭಾರತದಲ್ಲಿ ಈಗಾಗಲೇ ಜಾತ್ಯತೀತ ಎಂಬ ಪದ ಕಳಂಕಿತವಾಗಿದೆ. ಪ್ರಜಾಪ್ರಭುತ್ವ ಮತ್ತು ಸ್ವಾತಂತ್ರ್ಯ ಎಂಬ ಶಬ್ದಗಳೂ ಮುಂದಿನ ದಿನಗಳಲ್ಲಿ ಕಳಂಕಕ್ಕೊಳಗಾಗಲಿವೆ ಎಂದು ಅಭಿಪ್ರಾಯಪಟ್ಟಿದ್ದಾರೆ.

ಕೇಂದ್ರದಲ್ಲಿ ಪ್ರಸ್ತುತ ಅಧಿಕಾರದಲ್ಲಿರುವ ಬಿಜೆಪಿ ಸರ್ಕಾರ ನೇತಾಜಿ ಸುಭಾಷ್ ಚಂದ್ರ ಬೋಸ್ ಸಾವಿಗೆ ಸಂಬಂಧಿಸಿದ ಕಡತಗಳ ಕುರಿತು ಸಾಕಷ್ಟು ಮಾತನಾಡುತ್ತಿದೆ. ಈ ವಿಚಾರದಲ್ಲಿ ರಾಜಕಾರಣ ಮಾಡುತ್ತಿದೆ. ಆದರೆ, ಸಮಾಜದ ಅಸಮಾನತೆ ಹೋಗಲಾಡಿಸಲು ಪ್ರಯತ್ನಿಸಿದ ನೇತಾಜಿ ಅವರ ಆದರ್ಶಗಳನ್ನು ಪಾಲಿಸುವ ವಿಚಾರದಲ್ಲಿ ಮಾತ್ರ ಮೌನವಹಿಸುತ್ತಿದೆ. ಸ್ವತಂತ್ರ ಭಾರತದ ಯಾವೊಂದು ಸರ್ಕಾರವೂ ಅಸಮಾನತೆ ಹೋಗಲಾಡಿಸಲು, ಜನರಿಗೆ ನ್ಯಾಯ ಒದಗಿಸಲು, ಅವರ ಬೇಡಿಕೆ ಈಡೇರಿಸಲು ಪ್ರಯತ್ನಿಸಿಲ್ಲ. ಇದಕ್ಕೆ ಸಂಬಂಧಿಸಿದಂತೆ ನನ್ನ ಬಳಿ ಸಾಕಷ್ಟು ದಾಖಲೆಗಳಿವೆ ಎಂದು ಸೇನ್ ಹೇಳಿದ್ದಾರೆ.

ನನ್ನ ಅಂತಿಮ ವಾದ ಇಷ್ಟೆ, ಇಡೀ ಜನರಿಗೆ ಸಮಾನತೆ, ನ್ಯಾಯ ಸಿಗಬೇಕು. ಅದರ ಜತೆಗೆ ಶಿಕ್ಷಣ ಆರೋಗ್ಯ ಸೌಲಭ್ಯ ದೊರೆಯಬೇಕು. ಈ ಎಲ್ಲ ಅಂಶಗಳು ಬೋಸ್ ರನ್ನು ದೇಶದ ಸ್ವಾತಂತ್ರ್ಯಕ್ಕಾಗಿ ಹೋರಾಡುವಂತೆ ಮತ್ತು ಚಿಂತಿಸುವಂತೆ ಮಾಡಿತು ಎಂದು ಸೇನ್ ತಿಳಿಸಿದರು.

SCROLL FOR NEXT