ಹೈದರಾಬಾದ್ ಹೌಸ್ ನಲ್ಲಿ ಫ್ರಾಂಕೋಯಿಸ್ ಹೊಲಾಂಡೆ - ನರೇಂದ್ರ ಮೋದಿ
ನವದೆಹಲಿ: ಸುಮಾರು 60,000 ಕೋಟಿ ರುಪಾಯಿ ಮೌಲ್ಯದ ರಫೇಲ್ ಯುದ್ಧ ವಿಮಾನ ಖರೀದಿ ಒಪ್ಪಂದ ಸೇರಿದಂತೆ 13 ಒಪ್ಪಂದಗಳಿಗೆ ಭಾರತ ಫ್ರಾನ್ಸ್ ಸೋಮವಾರ ಸಹಿ ಹಾಕಿವೆ.
ಇಂದು ಹೈದರಾಬಾದ್ ಹೌಸ್ ನಲ್ಲಿ ನಡೆದ ದ್ವಿಪಕ್ಷೀಯ ಮಾತುಕತೆಯ ನಂತರ ಮಾತನಾಡಿದ ಪ್ರಧಾನಿ ನರೇಂದ್ರ ಮೋದಿ ಅವರು, ಉಗ್ರರ ವಿರುದ್ಧದ ಹೋರಾಟದಲ್ಲಿ ಒಂದಾಗಿದ್ದೇವೆ ಎಂದರು.
ಫ್ರಾನ್ಸ್ ಅಧ್ಯಕ್ಷರು ಗಣರಾಜ್ಯೋತ್ಸವದ ಮುಖ್ಯ ಅತಿಥಿಯಾಗಿ ಭಾಗವಹಿಸುತ್ತಿರುವುದು ತುಂಬಾ ಸಂತೋಷದ ವಿಚಾರ ಮತ್ತು ಇದೇ ಮೊದಲ ಬಾರಿಗೆ ಫ್ರಾನ್ಸ್ ಸೇನೆ ನಮ್ಮ ಗಣರಾಜ್ಯೋತ್ಸವ ಪರೇಡ್ ನಲ್ಲಿ ಭಾಗವಹಿಸುತ್ತಿದೆ ಪ್ರಧಾನಿ ಹೇಳಿದರು.
ಗಡಿ ಭದ್ರತೆಯಿಂದ ಸ್ಮಾರ್ಟ್ ಸಿಟಿ, ಸೌರ ಶಕ್ತಿ ಹಾಗೂ ಪರಮಾಣು ಶಕ್ತಿಯವರೆಗೂ ಉಭಯ ದೇಶಗಳ ಸಂಬಂಧ ಗಟ್ಟಿಯಾಗಿದೆ. ರಫೇಲ್ ಯುದ್ಧ ವಿಮಾನ ಖರೀದಿ ಸೇರದಿಂತೆ ದ್ವಿಪಕ್ಷೀಯ ಸಂಬಂಧ ವೃದ್ಧಿಗೆ ಸಂಬಂಧಿಸಿದ 13 ಒಪ್ಪಂಗಳಿಗೆ ಉಭಯ ದೇಶಗಳು ಸಹಿ ಹಾಕಿವೆ ಎಂದು ಪ್ರಧಾನಿ ತಿಳಿಸಿದರು.
"ರಫೇಲ್ ಯುದ್ಧ ವಿಮಾನ ಖರೀದಿ ಸಂಬಂಧವಾದ ವ್ಯವಹಾರದಲ್ಲಿ ನಾವು ಇನ್ನೊಂದು ಹೆಜ್ಜೆ ಮುಂದೆ ಇಡಲಿದ್ದೇವೆ. ಇದರೊಂದಿಗೆ ಭಾರತವು 36 ರಫೇಲ್ ಜೆಟ್ ಯುದ್ಧ ವಿಮಾನಗಳನ್ನು ಖರೀದಿಸುವ ವ್ಯವಹಾರವು ಒಂದು ನಿರ್ಣಾಯಕ ಹಂತಕ್ಕೆ ಬರುವುದೆಂಬ ಆಶಾವಾದವನ್ನು ನಾವು ಹೊಂದಿದ್ದೇವೆ ಎಂದು ಫ್ರಾನ್ಸ್ ಅಧ್ಯಕ್ಷ ಫ್ರಾಂಕೋಯಿಸ್ ಹೊಲಾಂಡೆ ಅವರು ನಿನ್ನೆ ಹೇಳಿದ್ದರು.