ತಿರುವನಂತಪುರ: ಏಷ್ಯಾನೆಟ್ ನ್ಯೂಸ್ ಪ್ರಧಾನ ಸಂಪಾದಕ, ಹಿರಿಯ ಪತ್ರಕರ್ತ ಟಿಎನ್ ಗೋಪಕುಮಾರ್ (58) ಶನಿವಾರ ಮುಂಜಾನೆ ತಿರುವನಂತಪುರ ಖಾಸಗಿ ಆಸ್ಪತ್ರೆಯಲ್ಲಿ ನಿಧನರಾಗಿದ್ದಾರೆ.
ಕಳೆದ ಕೆಲವು ತಿಂಗಳಿಂದ ಅವರು ಕ್ಯಾನ್ಸರ್ ನಿಂದ ಬಳಲುತ್ತಿದ್ದರು. ಶನಿವಾರ ಸಂಜೆ ತೈಕಾಡ್ ನ ಶಾಂತಿ ಕವಡಂನಲ್ಲಿ ಸಕಲ ಸರ್ಕಾರಿ ಗೌರವಗಳೊಂದಿಗೆ ಅವರ ಅಂತ್ಯಕ್ರಿಯೆ ನೆರವೇರಿತು. ಕೇರಳ ಸಿಎಂ ಉಮ್ಮನ್ ಚಾಂಡಿ, ಸಿನಿಮಾ ಹಾಗೂ ಮಾಧ್ಯಮ ಕ್ಷೇತ್ರದ ಗಣ್ಯರು ಅಗಲಿದ ಚೇತನದ ಅಂತಿಮ ದರ್ಶನ ಪಡೆದರು.
ಟಿಎನ್ ಜಿ ಎಂದೇ ಖ್ಯಾತರಾತದ ಹಿರಿಯ ಪತ್ರಕರ್ತ ಟಿಎನ್ ಗೋಪಕುಮಾರ್ ನೇರ, ನಿಷ್ಠುರ ನುಡಿಯ ಪತ್ರಕರ್ತ. 1957ರಲ್ಲಿ ಜನಿಸಿದ ಇವರು, ಇಂಡಿಯನ್ ಎಕ್ಸ್ ಪ್ರೆಸ್ ಪತ್ರಿಕೆಯ ಮೂಲಕ ತಮ್ಮ ವೃತ್ತಿ ಜೀವನ ಪ್ರವೇಶಿಸಿದರು. ಮಾತೃ ಭೂಮಿ, ನ್ಯೂಸ್ ಟೈಮ್, ಇಂಡಿಯಾ ಟುಡೇ, ದಿ ಇಂಡಿಪೆಂಡೆಂಟ್, ದಿ ಸ್ಟೇಟ್ಸ್ ಮನ್, ಬಿಬಿಸಿ... ಹೀಗೆ ಹಲವು ಪ್ರಮುಖ ಪತ್ರಿಕೆ, ವಿದ್ಯುನ್ಮಾನ ಮಾಧ್ಯಮಗಳಲ್ಲಿ ಸೇವೆ ಸಲ್ಲಿಸಿದರು. ಅದರಲ್ಲೂ ಏಷ್ಯಾ ನೆಟ್ ನ್ಯೂಸ್ ನಲ್ಲಿ ಗೋಪಕುಮಾರ್ ನಿರೂಪಣೆಯಲ್ಲಿ ಆರಂಭವಾದ ಟಿವಿ ಶೋ ಕನ್ನಡಿ ಯು ಅವರನ್ನು ಮತ್ತೊಂದು ಮಜಲಿನತ್ತ ಕೊಂಡೊಯ್ಯಿತು.
ಸತತ 20 ವರ್ಷಗಳ ಕಾಲ ಪ್ರಸಾರವಾದ ಕನ್ನಡಿ ಭಾರತದಲ್ಲಿ ಮಾತ್ರವಲ್ಲದೇ ವಿದೇಶಗಳಲ್ಲೂ ಜನಮನ್ನಣೆಗೆ ಪಾತ್ರವಾಯಿತು. ಗೋಪಕುಮಾರ್ ಅವರ ನಿರೂಪಣೆಯ ಶೈಲಿ, ಅವರ ಠೀವಿ, ತಗ್ಗುಸ್ಥಾಯಿಯ ಧ್ವನಿ ಈ ಕಾರ್ಯಕ್ರಮಕ್ಕೆ ಇನ್ನಷ್ಟು ಮೆರುಗು ನೀಡಿತು. ಈ ಶೋ ಮೂಲಕ ಅವರು ಎಲ್ಲರ ಮನೆ ಮನಗಳಲ್ಲಿ ಸ್ಥಾನ ಪಡೆದರು. ಬಡತನ, ರೋಗ, ನಿರ್ಲಕ್ಷ್ಯ, ಸಾಮಾಜಿಕ ಪೂರ್ವಗ್ರಹಗಳಿಂದ ನೊಂದವರ, ಶೋಷಣೆಗೊಳಗಾದವರ ಬಗ್ಗೆ ಮಾಹಿತಿ ನೀಡುವ 30 ನಿಮಿಷಗಳ ಕಾರ್ಯಕ್ರಮ ಇದಾಗಿತ್ತು. ಆರಂಭದಲ್ಲಿ ಶೋಷಿತರ ನೋವಿಗೆ ಸ್ಪಂದಿಸಿ, ಸ್ವತಃ ಗೋಪಕುಮಾರ್ ಅವರೇ ಕೆಲವರಿಗೆ ತಮ್ಮ ಕೈಲಾದ ಮಟ್ಟಿಗೆ ನೆರವು ನೀಡುತ್ತಿದ್ದರು. ಅವರ ಈ ನಡೆಯು ಅವರೊಳಗಿನ ಮಾನವೀಯ ಹೃದಯಕ್ಕೆ ಕನ್ನಡಿ ಹಿಡಿದಿತ್ತು. ನಂತರದ ದಿನಗಳಲ್ಲಿ ಈ ಕಾರ್ಯಕ್ರಮ ಎಷ್ಟೊಂದು ಖ್ಯಾತಿ ಪಡೆಯಿತೆಂದರೆ, ದೇಶ-ವಿದೇಶಗಳಿಂದ ಹಣಕಾಸು ನೆರವು ಹರಿದು ಬರಲಾರಂಭಿಸಿದವು. ಈ ಬಗ್ಗೆ ಒಮ್ಮೆ ದಿ ಹಿಂದೂ ಗೆ ಸಂದರ್ಶನ ನೀಡಿದ್ದ ಗೋಪಕುಮಾರ್, ಕನ್ನಡಿ ಶೋ ನೋಡಿ ಹರಿದು ಬರುತ್ತಿದ್ದ ಹಣಕಾಸು ನೆರವು ನೋಡಿದರೆ, ನಮಗೆ ಒಂದು ಫಂಡ್ ಆರಂಭಿಸದೇ ಬೇರೆ ದಾರಿಯಿರಲಿಲ್ಲ. ನಿಜ ಹೇಳಬೇಕೆಂದರೆ, ಪ್ರಾಮಾಣಿಕತೆ, ವಿಶ್ವಾಸಾರ್ಹತೆ, ಸುಸಂಗತತೆ ಹಾಗೂ ಬದ್ಧತೆಯೇ ನಮ್ಮ ಈ ಕಾರ್ಯಕ್ರಮದ ಯುಎಸ್ ಪಿ(ಯುನೀಕ್ ಸೆಲ್ಲಿಂಗ್ ಪಾಯಿಂಟ್) ಎಂದಿದ್ದರು.
ಲೇಖನಗಳು, ಅಂಕಣಗಳಲ್ಲದೇ ಅವರು 14ಕ್ಕೂ ಹೆಚ್ಚು ಕೃತಿಗಳನ್ನು ರಚಿಸಿದ್ದಾರೆ. ಜೀವನ್ ಮಸಾಯ್ ಎಂಬ ಸಿನಿಮಾ ನಿರ್ದೇಶಿಸಿದ, ದೂರದರ್ಶನದಲ್ಲಿ ವೇರುಗಳ್ ಎಂಬ ಧಾರಾವಾಹಿ ನಿರ್ದೇಶಿಸಿದ ಕೀರ್ತಿಯೂ ಇವರಿಗೆ ಸಲ್ಲುತ್ತದೆ. ಕೇರಳ ಸಾಹಿತ್ಯ ಅಕಾಡೆಮಿ ಸೇರಿ ಹಲವು ಪ್ರಶಸ್ತಿಗಳು ಅವರ ಮುಡಿಗೇರಿವೆ.