ಬಿಲೈ(ಛತ್ತೀಸ್ ಘಡ): "ನಾನು ಸತ್ತರೆ, ಯಾರು ನನ್ನನ್ನು ವೇಶ್ಯೆ ಎಂದು ಕರೆಯುವುದಿಲ್ಲ" ಇದು ದೇಶದ ನ್ಯಾಯಾಂಗ ವ್ಯವಸ್ಥೆಯ ಮೇಲೆ ನಂಬಿಕೆ ಕಳೆದುಕೊಂಡ ಅತ್ಯಾಚಾರ ಸಂತ್ರಸ್ತೆಯ ಡೆತ್ ನೋಟ್ ನಲ್ಲಿರುವ ಸಾಲುಗಳು.
ಛತ್ತೀಸ್ ಘಡದ ಬಿಲಾಯ್ ಜಿಲ್ಲೆಯ 21 ವರ್ಷದ ಬಿಎಸ್ಸಿ ವಿದ್ಯಾರ್ಥಿನಿ ಬರೆದ ಡೆತ್ ನೋಟ್. ಜ್ಯಾಂಡೀಸ್ ರೋಗದಿಂದ ಬಳಲುತ್ತಿದ್ದ ಯುವತಿ 2014 ರಲ್ಲಿ ಬಿಲಾಯ್ ನ ಲಾಲ್ ಬಹದ್ದೂರ್ ಶಾಸ್ತ್ರಿ ಆಸ್ಪತ್ರೆಗೆ ದಾಖಲಾಗಿದ್ದಳು. ಯುವತಿ ಮೂರುದಿನ ಆಸ್ಪತ್ರೆಯಲ್ಲಿ ಅಡ್ಮಿಟ್ ಆಗಿದ್ದಳು. ಈ ವೇಳೆ ಆಕೆಗೆ ಮತ್ತು ಬರುವ ಔಷದಿ ನೀಡಿ ಮೊದಲಿಗೆ ವೈದ್ಯ , ನಂತರ ಇಬ್ಬರು ಪೊಲೀಸ್ ಕಾನ್ ಸ್ಟೇಬಲ್ ಗಳು ಆಕೆಯ ಮೇಲೆ ಅತ್ಯಾಚಾರ ನಡೆಸಿದ್ದರು.
ನಂತರ ಆಕೆಗೆ ಬೆದರಿಕೆ ಹಾಕಿದ ದುಷ್ಕರ್ಮಿಗಳು, ಅತ್ಯಾಚಾರದ ವಿಡಿಯೋ ಮಾಡಿದ್ದು, ವಿಷಯವನ್ನು ಯಾರ ಬಳಿಯು ಬಾಯಿ ಬಿಡದಂತೆ ಬ್ಲ್ಯಾಕ್ ಮೇಲ್ ಮಾಡಿ ಆಕೆಯ ಮೇಲೆ ಸತತ ಆರು ತಿಂಗಳ ಕಾಲ ಆಕೆಯ ಅತ್ಯಾಚಾರ ನಡೆಸಿ, ಹಣ ಸುಲಿಗೆ ಮಾಡಿದ್ದರು.
2015ರ ಜನವರಿಯಲ್ಲಿ ಆಕೆ ಈ ವಿಷಯವನ್ನು ತನ್ನ ಪೋಷಕರ ಬಳಿ ಹೇಳಿಕೊಂಡಿದ್ದಾಳೆ. ಆ ದಿನವೇ ಆಸ್ಪತ್ರೆಯ ವೈದ್ಯ ಗೌತಮ್ ಪಂಡಿತ್, ಪೇದೆಗಳಾದ ಸೌರಬ್ ಭಕ್ತ ಮತ್ತು ಚಂದ್ರ ಪ್ರಕಾಶ್ ಪಾಂಡೆ ಅವರನ್ನು ಪೊಲೀಸರು ಬಂಧಿಸಿದ್ದಾರೆ.
ನ್ಯಾಯಾಂಗ ವ್ಯವಸ್ಥೆ ಮೇಲೆ ನಂಬಿಕೆ ಕಳೆದು ಕೊಂಡ ಯುವತಿ, ಕಳೆದ ಗುರುವಾರ ಆತ್ಮಹತ್ಯೆಗೆ ಶರಣಾಗಿದ್ದಾಳೆ. ಈ ವೇಳೆ ಡೆತ್ ನೋಟ್ ಬರೆದಿಟ್ಟಿರುವ ಆಕೆ, ಪ್ರಕರಣ ಸಂಬಂಧವಾಗಿ ಕೋರ್ಟ್ ಗೆ ನಾನು ಹಾಜರಾಗಬೇಕು, ನಾನು ಕೋರ್ಟ್ ಗೆ ಹೋಗುತ್ತೇನೆ, ಅಲ್ಲಿ ಜಡ್ಜ್ ಗೈರಾಗಿರುತ್ತಾರೆ. ಹೀಗೆ ಮುಂದುವರಿಯುತ್ತದೆ ಎಂದು ತನ್ನ ಹತಾಶೆ ತೋಡಿಕೊಂಡಿದ್ದಾಳೆ.
ಇನ್ನು ಪೊಲೀಸರಿಗೆ ದೂರು ಕೊಡಲು ಹೋದಾಗ ಸುಳ್ಳು ಹೇಳುತ್ತಿರುವುದಾಗಿ ಆಕೆಗೆ ಥಳಿಸಲಾಗಿತ್ತು. ಈ ಎಲ್ಲಾ ವಿಷಯಗಳನ್ನು ಆಕೆ ವಕೀಲರಿಗೆ ತಿಳಿಸಿದ್ದಳು. ವಕೀಲರು ಕೂಡ ನಮ್ಮ ಪರವಾಗಿ ವಾದ ಮಾಡಿ ನ್ಯಾಯ ದೊರಕಿಸಿಕೊಡುವುದಿಲ್ಲ ಎಂಬುದಾಗಿ ಮೃತ ಯುವತಿ ಸಹೋದರ ತಿಳಿಸಿದ್ದಾನೆ.