ನವದೆಹಲಿ: ಕೇಂದ್ರ ಸರ್ಕಾರ ಎರಡು ವರ್ಷಗಳನ್ನು ಪೂರೈಕೆ ಮಾಡಿದ ಹಿನ್ನೆಲೆಯಲ್ಲಿ ಸಂಪುಟ ಸಹೋದ್ಯೋಗಿಗಳೊಂದಿಗೆ ಸಭೆ ನಡೆಸಿ, ಸಚಿವರ ಕಾರ್ಯಕ್ಷಮತೆಯನ್ನು ಪರಿಶೀಲಿಸಿದ್ದ ಪ್ರಧಾನಿ ನರೇಂದ್ರ ಮೋದಿ ತಮ್ಮ ಸಂಪುಟದ ಅತ್ಯುತ್ತಮ ಸಚಿವರನ್ನು ಪಟ್ಟಿ ಮಾಡಿದ್ದಾರೆ.
ಪ್ರಧಾನಿ ನರೇಂದ್ರ ಮೋದಿ ಅವರ ಪರಿಶೀಲನೆ ಪ್ರಕಾರ, ಇಂಧನ ಸಚಿವ ಪಿಯೂಷ್ ಗೋಯಲ್, ರಸ್ತೆ, ಹೆದ್ದಾರಿ ಖಾತೆ ಸಚಿವ ನಿತಿನ್ ಗಡ್ಕರಿ ಅತ್ಯುತ್ತಮ ಕಾರ್ಯಕ್ಷಮತೆ ಹೊಂದಿದ್ದು ಮೋದಿ ಮೆಚ್ಚುಗೆ ಗಳಿಸಿರುವ ಸಚಿವರಾಗಿದ್ದಾರೆ ಎಂದು ತಿಳಿದುಬಂದಿದೆ. ಆರೋಗ್ಯ ಸಚಿವ ಜೆಪಿ ನಡ್ಡಾ ಸೇರಿದಂತೆ ಕೆಲವು ಸಚಿವರ ಕಾರ್ಯವೈಖರಿ ಬಗ್ಗೆ ಪ್ರಧಾನಿ ಮೋದಿ ಅಸಮಾಧಾನವನ್ನು ವ್ಯಕ್ತಪಡಿಸಿದ್ದು, ದೆಹಲಿಯ ಏಮ್ಸ್ ನಂತಹ ಸರ್ಕಾರಿ ಸ್ವಾಮ್ಯದ ಆಸ್ಪತ್ರೆಗಳಲ್ಲಿ ಮತ್ತಷ್ಟು ವೇಗ ಪಡೆಯಬೇಕು, ಐಐಟಿ, ಐಐಎಂ ಕಾಲೇಜುಗಳ ಸಂಖ್ಯೆ ಹೆಚ್ಚಬೇಕು ಎಂದು ಮೋದಿ ಸಚಿವರಿಗೆ ತಾಕೀತು ಮಾಡಿದ್ದಾರೆ ಎನ್ನಲಾಗಿದೆ.
ಜನರಿಗೆ ಅನುಕೂಲವಾಗುವ ಅನೇಕ ಯೋಜನೆಗಳನ್ನು ಸರ್ಕಾರ ಜಾರಿಗೊಳಿಸಿದ್ದರು, ಸಚಿವರು ಸಂಸದರು ಯೋಜನೆಗಳನ್ನು ಮತ್ತಷ್ಟು ಪರಿಣಾಮಕಾರಿಯಾಗಿ ಜಾರಿಗೊಳಿಸಲು ಯತ್ನಿಸಬೇಕು ಎಂದು ಮೋದಿ ಸಚಿವರಿಗೆ ಕರೆ ನೀಡಿದ್ದು ಯೋಜನೆಗಳನ್ನು ಪರಿಣಾಮಕಾರಿಯಾಗಿ ಜಾರಿ ಮಾಡುವುದಕ್ಕಾಗಿ ಪ್ರತಿ ಮೂರು ತಿಂಗಳಿಗೊಮ್ಮೆ ಪರಿಶೀಲನೆಯನ್ನು ನಡೆಸಲು ತೀರ್ಮಾನಿಸಿದ್ದಾರೆ.