ಚೆನ್ನೈ: ಭಾರಿ ವಿವಾದಕ್ಕೆ ಕಾರಣವಾಗಿರುವ 2ಜಿ ಹಗರಣದ ಭಾಗವಾದ ಏರ್ಸೆಲ್-ಮ್ಯಾಕ್ಸಿಸ್ ಹಗರಣಕ್ಕೆ ಸಂಬಂಧಿಸಿದಂತೆ ಮಾಜಿ ಕೇಂದ್ರ ಸಚಿವ ಪಿ. ಚಿದಂಬರಂ ಪುತ್ರ ಕಾರ್ತಿ ಚಿದಂಬರಂಗೆ ಮಂಗಳವಾರ ಜಾರಿ ನಿರ್ದೇಶನಾಲಯ ಸಮನ್ಸ್ ಜಾರಿ ಮಾಡಿದೆ.
ಏರ್ಸೆಲ್-ಮ್ಯಾಕ್ಸಿಸ್ ಹಗರಣದಲ್ಲಿ ಅಕ್ರಮ ಹಣ ವರ್ಗಾವಣೆ ಮಾಡಿದ ಆರೋಪಕ್ಕೆ ಸಂಬಂಧಿಸಿದಂತೆ ಜಾರಿ ನಿರ್ದೇಶನಾಲಯ ಸಮನ್ಸ್ ಜಾರಿ ಮಾಡಿದ್ದು, ತಮ್ಮ ಸಂಸ್ಥೆಯ ಆರ್ಥಿಕ ವ್ಯವಹಾರಗಳ ದಾಖಲೆಗಳನ್ನು ತನಿಖಾಧಿಕಾರಿಗಳಿಗೆ ನೀಡುವಂತೆ ಇಡಿ ಅಧಿಕಾರಿಗಳು ಸೂಚಿಸಿದ್ದಾರೆ. 2015ರಿಂದಲೇ ಪ್ರಕರಣದ ತನಿಖೆ ನಡೆಯುತ್ತಿದ್ದು, ಇದೇ ಮೊದಲ ಬಾರಿಗೆ ಕಾರ್ತಿ ಚಿದಂಬರಂ ವಿರುದ್ಧ ಜಾರಿ ನಿರ್ದೇಶನಾಲಯ ಸಮನ್ಸ್ ಜಾರಿ ಮಾಡಿದೆ.
ಈ ಹಿಂದಷ್ಟೇ ಕೇಂದ್ರ ಹಣಕಾಸು ಸಚಿವ ಅರುಣ್ ಜೇಟ್ಲಿ ಅವರು ಯುಪಿಎ ಅವಧಿಯಲ್ಲಿನ ಎಲ್ಲ ಹಗರಣಗಳ ಕುರಿತು ತನಿಖೆ ನಡೆಸಲಾಗುತ್ತಿದ್ದು, ತನಿಖೆ ಪ್ರಮುಖ ಹಂತದಲ್ಲಿದೆ. ಅಂತೆಯೇ ತಪ್ಪಿತಸ್ಥರ ವಿರುದ್ಧ ಕ್ರಮ ತೆಗೆದುಕೊಳ್ಳಲಾಗುವುದು ಎಂದು ತಿಳಿಸಿದ್ದರು. ಖಾಸಗಿ ಸಂಸ್ಥೆಗೆ ಲಾಭ ಮಾಡಿಕೊಡುವ ಸಲುವಾಗಿ ಕಾರ್ತಿ ಚಿದಂಬರಂ ಎರ್ ಸೆಲ್ ಟೆಲಿ ವೆಂಚರ್ಸ್ ಸಂಸ್ಥೆಗೆ ಸುಮಾರು 26 ಲಕ್ಷ ಹಣವನ್ನು ವರ್ಗಾವಣೆ ಮಾಡಿದ್ದರು. ಹೀಗಾಗಿ ಹವಾಲಾ ಹಣ ನಿಯಂತ್ರಣ ಕಾಯ್ದೆಯಡಿಯಲ್ಲಿ ಕಾರ್ತಿ ಚಿದಂಬರಂ ವಿರುದ್ಧ ಪ್ರಕರಣ ದಾಖಲಾಗಿದ್ದು, ತನಿಖೆಯ ಭಾಗವಾಗಿ ಇಂದು ಜಾರಿ ನಿರ್ದೇಶನಾಲಯ ಕಾರ್ತಿ ಚಿದಂಬರಂಗೆ ಸಮನ್ಸ್ ಜಾರಿ ಮಾಡಿದೆ.