ನವದೆಹಲಿ: ಮಂಗಳವಾರ ಮೋದಿ ಸಂಪುಟಕ್ಕೆ ಸಚಿವರಾಗಿ ಪ್ರಮಾಣವಚನ ಸ್ವೀಕರಿಸಿದ ಎಂ.ಜೆ.ಅಕ್ಬರ್ ಅವರ ವೃತ್ತಿ ಜೀವನ ಸ್ವಾರಸ್ಯಕರವಾಗಿದೆ. ಪತ್ರಕರ್ತ, ಲೇಖಕರಾಗಿ ಗುರುತಿಸಿಕೊಂಡಿದ್ದ ಎಂ.ಜೆ.ಅಕ್ಬರ್ ರಾಜಕೀಯಕ್ಕೆ ಸೇರಿದ್ದು ಕಾಂಗ್ರೆಸ್ ಸಂಸದನಾಗಿ 1989ರಲ್ಲಿ ಆರಿಸಿ ಬಂದರು. ಆಗ ಪ್ರಧಾನಿಯಾಗಿದ್ದವರು ರಾಜೀವ್ ಗಾಂಧಿ.
65 ವರ್ಷ ಪ್ರಾಯದ ಅಕ್ಬರ್ ಇತ್ತೀಚೆಗೆ ಮಧ್ಯಪ್ರದೇಶದಿಂದ ರಾಜ್ಯಸಭೆಗೆ ಆಯ್ಕೆಯಾಗಿದ್ದರು. ಮೋದಿಯವರ ಅಭಿವೃದ್ಧಿ ಅಜೆಂಡಾಕ್ಕೆ ತಕ್ಕನಾಗಿ ಕೆಲಸ ಮಾಡುವ ಸಾಮರ್ಥ್ಯವಿದೆ ಎಂದು ಮೋದಿಯವರು ನಂಬಿಕೆ, ವಿಶ್ವಾಸ ಇರಿಸಿಕೊಂಡಿರುವ ಅಕ್ಬರ್ ಬಿಜೆಪಿಯಲ್ಲಿ ಆಧುನಿಕ ಮುಸಲ್ಮಾನರ ಧ್ವನಿಯಾಗಿದ್ದಾರೆ ಎಂದು ಹೇಳಬಹುದು. ಮೋದಿ ಸರ್ಕಾರ ಹಿಂದುತ್ವದ ಮೇಲೆ ನಿಂತಿರುವಾಗ ಮುಸಲ್ಮಾನ ಅತ್ಪಸಂಖ್ಯಾತರ ಮನವೊಲಿಸಲು ಅದೇ ಸಮುದಾಯದ ಸಂಸದರೊಬ್ಬರನ್ನು ತಮ್ಮ ಸಂಪುಟಕ್ಕೆ ಸೇರಿಸುವ ಅಗತ್ಯವಿತ್ತು.
ಬಿಜೆಪಿಯ ವಕ್ತಾರರಾಗಿ ಅಕ್ಬರ್ ಆಗಾಗ ಸರ್ಕಾರದ ವಿದೇಶಾಂಗ ನೀತಿಗಳ ಬಗ್ಗೆ ಮಾತನಾಡುತ್ತಿದ್ದರು.
ಖ್ಯಾತ ಸಂಪಾದಕ ಮತ್ತು ಹಲವು ಪುಸ್ತಕಗಳ ಲೇಖಕರಾಗಿರುವ ಅಕ್ಬರ್ ಜವಾಹರಲಾಲ ನೆಹರೂ ಅವರ ಜೀವನ ಚರಿತ್ರೆಯನ್ನು ಬರೆದಿದ್ದಾರೆ. 80ರ ದಶಕದಲ್ಲಿ ರಾಜಕೀಯ ಜೀವನಕ್ಕೆ ಕಾಲಿಟ್ಟ ಅಕ್ಬರ್ ಅಂದು ರಾಜೀವ್ ಗಾಂಧಿಗೆ ಆಪ್ತವಾಗಿದ್ದರು.
ಬಿಹಾರದ ಕಿಶಂಗಂಜ್ ಕ್ಷೇತ್ರದಿಂದ ಲೋಕಸಭಾ ಚುನಾವಣೆಗೆ ಸ್ಪರ್ಧಿಸಿದ್ದ ಅಕ್ಬರ್ ಗೆದ್ದು ಬಂದಿದ್ದರು, ಆದರೆ ಕಾಂಗ್ರೆಸ್ ಲೋಕಸಭಾ ಚುನಾವಣೆಯಲ್ಲಿ ಸೋತಿತ್ತು. ರಾಜೀವ್ ಗಾಂಧಿ 1991ರಲ್ಲಿ ಸೋತಾಗ ಕಾಂಗ್ರೆಸ್ ತೊರೆದು ಮತ್ತೆ ತಮ್ಮ ಪತ್ರಿಕೋದ್ಯಮ ವೃತ್ತಿಗೆ ಮರಳಿದರು.
ನರೇಂದ್ರ ಮೋದಿಯವರು ಗುಜರಾತ್ ಮುಖ್ಯಮಂತ್ರಿಯಾಗಿದ್ದಾಗ, 2002ರ ಗೋಧ್ರಾ ಹತ್ಯಾಕಾಂಡದ ಸಮಯದಲ್ಲಿ ಮೋದಿಯವರನ್ನು ಟೀಕಿಸಿದ್ದ ಅಕ್ಬರ್ ನಿಧಾ ನವಾಗಿ ಕೇಸರಿ ಪಕ್ಷದ ಪ್ರಭಾವಕ್ಕೆ ಒಳಗಾದರು. ಇದೀಗ ಬಿಜೆಪಿ ಅಕ್ಬರ್ ರವರಿಂದ ಬಯಸುವುದೆಂದರೆ ನಿರ್ಭೀತಿಯಿಂದ ನಿರರ್ಗಳವಾಗಿ ಇಂಗ್ಲೀಷ್ ಮಾತನಾಡುವ ಮುಸಲ್ಮಾನ ಧ್ವನಿ ಬೇಕಾಗಿದೆ. ಅದನ್ನು ಮೋದಿಯವರು ಅಕ್ಬರ್ ಅವರಲ್ಲಿ ನಿರೀಕ್ಷಿಸುತ್ತಿದ್ದಾರೆ.