ನವದೆಹಲಿ: ಆರ್ಥಿಕ ಬೆಳವಣಿಗೆ ವಿಷಯದಲ್ಲಿ ರಾಜಿ ಮಾಡಿಕೊಂಡು ಹಣದುಬ್ಬರವನ್ನು ನಿಯಂತ್ರಿಸುವ ವಿಧಾನವನ್ನು ಟೀಕಿಸಿರುವ ಸುಬ್ರಹ್ಮಣಿಯನ್ ಸ್ವಾಮಿ, ಅಹಿತಕಾರಿ ಧ್ಯೇಯ ಹೊಂದಿರುವ ವ್ಯಕ್ತಿ ಮಾತ್ರ ಎಲ್ಲರಿಗಿಂತ ಭಿನ್ನವಾದ ಆರ್ಥಿಕ ದೃಷ್ಟಿಕೋನ ಹೊಂದಿರುತ್ತಾರೆ ಎಂದು ಹೇಳಿದ್ದಾರೆ.
ಆರ್ ಬಿ ಐ ನ ಗೌರ್ನರ್ ರಘುರಾಮ್ ರಾಜನ್ ಅವರನ್ನು ಕಟುವಾಗಿ ವಿರೋಧಿಸುವ ಸುಬ್ರಹ್ಮಣಿಯನ್ ಸ್ವಾಮಿ, ಹಣದುಬ್ಬರಕ್ಕೆ ಕಡಿವಾಣ ಹಾಕಲು ರಘುರಾಮ್ ರಾಜನ್ ಅನುಸರಿಸುತ್ತಿರುವ ವಿಧಾನವನ್ನು ಟೀಕಿಸಿದ್ದು, ಅರ್ಥಶಾಸ್ತ್ರದ ವಿಷಯದಲ್ಲಿ ಏನು ತಿಳಿಯದವರು ಅಥವಾ ದೇಶದ ಹೆಸರು ಹಾಳುಮಾಡುವ ಉದ್ದೇಶ ಹೊಂದಿರುವವರು ಮಾತ್ರ ಭಿನ್ನವಾದ ಆರ್ಥಿಕ ದೃಷ್ಟಿಕೋನ ಹೊಂದಿರುತ್ತಾರೆ ಎಂದು ಟ್ವೀಟರ್ ನಲ್ಲಿ ಹೇಳಿದ್ದಾರೆ. ಭಾರತ ಹಣದುಬ್ಬರದ ತಡೆಯ ಗೀಳಿನ ಬಗ್ಗೆ ಗಮನ ಹರಿಸುವುದಕ್ಕಿಂತ ಆರ್ಥಿಕ ಬೆಳವಣಿಗೆ ಬಗ್ಗೆ ಹೆಚ್ಚು ಗಮನ ಕೇಂದ್ರೀಕರಿಸಬೇಕು ಎಂದು ನೊಬೆಲ್ ಪ್ರಶಸ್ತಿಗೆ ಭಾಜನರಾಗುವ ಅರ್ಥಶಾಸ್ತ್ರಜ್ಞ ಜೋಸೆಫ್ ಸ್ಟಿಗ್ಲಿಟ್ಜ್ ನೀಡಿದ್ದ ಹೇಳಿಕೆಗೆ ಪ್ರತಿಕ್ರಿಯೆ ನೀಡಿರುವ ಸುಬ್ರಹ್ಮಣಿಯನ್ ಸ್ವಾಮಿ ಭಾರತದ ಆರ್ಥಿಕತೆ ಬಗ್ಗೆ ತಮ್ಮ ದೃಷ್ಟಿಕೋನವನ್ನು ಸಮರ್ಥಿಸಿಕೊಳ್ಳಲು ಬೇರೆಯವರ ಸಹಾಯ ಅಗತ್ಯವಿಲ್ಲ, ನಾನು ಅಮೆರಿಕನ್ನರಿಗೆ 50 ವರ್ಷಗಳ ಹಿಂದೆಯೇ ಅರ್ಥಶಾಸ್ತ್ರ ಬೋಧಿಸಿದ್ದೇನೆ ಎಂದು ಹೇಳಿದ್ದಾರೆ.