ನವದೆಹಲಿ: ಉಗ್ರರಿಗೆ ಸ್ಫೂರ್ತಿಯಾಗುವಂತಹ ಭಾಷಣ ಮಾಡಿದ ಪ್ರಕರಣದಲ್ಲಿ ತನಿಖೆ ಎದುರಿಸುತ್ತಿರುವ ಇಸ್ಲಾಮ್ ಪ್ರಚಾರಕ ಜಾಕಿರ್ ನಾಯಕ್ ತನ್ನನ್ನು ಬೆಂಬಲಿಸುವಂತೆ ಮುಸ್ಲಿಂ ಸಮುದಾಯಕ್ಕೆ ಟ್ವಿಟರ್ ನಲ್ಲಿ ಮನವಿ ಮಾಡಿದ್ದಾರೆ.
ಮಾಧ್ಯಮಗಳಲ್ಲಿ ತಮ್ಮ ವಿರುದ್ಧ ಸುದ್ದಿ ಪ್ರಸಾರವಾಗುತ್ತಿದ್ದು ತಮ್ಮನ್ನು ಬೆಂಬಲಿಸಬೇಕು, ನ್ಯಾಯಕ್ಕೆ ಜಯ ಸಿಗಲಿ ಎಂದು ಜಾಕಿರ್ ನಾಯಕ್ ಟ್ವೀಟ್ ಮಾಡಿದ್ದಾರೆ. ಮುಂಬೈ ಮೂಲದ ಇಸ್ಲಾಮ್ ಧರ್ಮ ಪ್ರಚಾರಕನಾಗಿರುವ ಜಾಕಿರ್ ನಾಯಕ್, ಢಾಕಾದಲ್ಲಿ ದಾಳಿ ನಡೆಸಿ 20 ಜನರ ಸಾವಿಗೆ ಕಾರಣವಾದ ಉಗ್ರರಿಗೆ ಸ್ಫೂರ್ತಿಯಾಗಿರುವ ಆರೋಪ ಎದುರಿಸುತ್ತಿದ್ದು ಗುಪ್ತಚರ ಇಲಾಖೆಯಿಂದ ತನಿಖೆ ಎದುರಿಸಿದ್ದಾರೆ. ಇತರ ಧರ್ಮಗಳ ಬಗ್ಗೆ ದ್ವೇಷ ಭಾಷಣ ಮಾಡಿರುವ ಹಿನ್ನೆಲೆಯಲ್ಲಿ ಜಾಕಿರ್ ನಾಯಕ್ ಪ್ರವೇಶವನ್ನು ಬ್ರಿಟನ್, ಕೆನಡಾ ಸೇರಿದಂತೆ ಹಲವು ದೇಶಗಳು ನಿಷೇಧಿಸಿವೆ. ಜಾಕಿರ್ ನಾಯಕ್ ದ್ವೇಷ ಭಾಷಣಗಳು ಪ್ರಸಾರವಾಗುತ್ತಿದ್ದ ಆತನ ಪೀಸ್ ಟಿವಿಯ ಬಗ್ಗೆಯೂ ತನಿಖೆ ನಡೆಡಯುತ್ತಿದ್ದು, ಜಾಕಿರ್ ನಾಯಕ್ ಹಾಗೂ ಆತನ ಪೀಸ್ ಟಿವಿ ವಿರುದ್ಧ ಕಠಿಣ ಕ್ರಮ ಕೈಗೊಳ್ಳಬೇಕೆಂದು ಉತ್ತರ ಪ್ರದೇಶದ ಮೌಲ್ವಿಗಳೂ ಒತ್ತಾಯಿಸಿದ್ದಾರೆ. ಈ ಹಿನ್ನೆಲೆಯಲ್ಲಿ ತನಗೆ ಬೆಂಬಲವಾಗಿ ನಿಲ್ಲುವಂತೆ ಜಾಕಿರ್ ನಾಯಕ್ ಟ್ವಿಟರ್ ನಲ್ಲಿ ಮುಸ್ಲಿಂ ಸಮುದಾಯಕ್ಕೆ ಕರೆ ನೀಡಿದ್ದಾರೆ.