ತಮಿಳಿನ ಅವ್ವೈ ಶನ್ಮುಗಿ ಚಿತ್ರದಲ್ಲಿ ಹೆಣ್ಣಿನ ವೇಷದಲ್ಲಿ ಕಂಗೊಳಿಸಿದ ನಟ ಕಮಲ್ ಹಾಸನ್.
ವಿಲ್ಲುಪುರಂ: ಪತ್ನಿಯನ್ನು ಭೇಟಿ ಮಾಡುವ ಹಪಹಪಿಕೆಯಿಂದ ಮಹಿಳೆಯ ಮಾರುವೇಷದಲ್ಲಿ ಹೋಗಿ ಸ್ಥಳೀಯರಿಂದ ಸಿಕ್ಕಿಬಿದ್ದು ಏಟುತಿಂದ ಘಟನೆ ತಮಿಳುನಾಡಿನ ವಿಲ್ಲುಪುರಂ ಜಿಲ್ಲೆಯಲ್ಲಿ ಮೊನ್ನೆ ಶನಿವಾರ ನಡೆದಿದೆ.
27 ವರ್ಷದ ಶೇಖರ್ ಜಯಂಕೊಂಡಮ್ ನ ನಿವಾಸಿ. ಕೆಲ ತಿಂಗಳ ಹಿಂದೆ ಸಿಂಗಾಪುರ್ ನಿಂದ ಕೆಲಸ ಬಿಟ್ಟುಬಂದಿದ್ದ. ಇದರಿಂದ ಸಿಟ್ಟುಗೊಂಡ ಅವನ ಪತ್ನಿಯ ತಾಯಿ ಮಗಳನ್ನು ತನ್ನ ಮನೆಗೆ ಕರೆಸಿಕೊಂಡು ಗಂಡನ ಮನೆಗೆ ಹೋಗಬಾರದು, ಅವನನ್ನು ಭೇಟಿಯಾಗಬಾರದು, ಅವನ ಜೊತೆ ಇನ್ನು ಮುಂದೆ ಸಂಸಾರ ಮಾಡಬೇಡ ಎಂದು ತಾಕೀತು ಮಾಡಿದ್ದಳಂತೆ.
ಹೆಂಡತಿ ತನ್ನ ಬಳಿಯಿಲ್ಲದ ಕಾರಣ ತೀವ್ರ ಬೇಸರಗೊಂಡಿದ್ದ ಶೇಖರ್ ಅವಳನ್ನು ಹೇಗಾದರೂ ಮಾಡಿ ಭೇಟಿಯಾಗಬೇಕೆಂದುಕೊಂಡ. ಹೆಣ್ಣಿನಂತೆ ಮಾರುವೇಷದಲ್ಲಿ ಹೋದರೆ ಅತ್ತೆಗೆ ಗೊತ್ತಾಗುವುದಿಲ್ಲ, ಹೆಂಡತಿಯನ್ನು ಹೊರಗಡೆ ಕರೆದುಕೊಂಡು ಹೋಗಬಹುದು ಎಂದುಕೊಂಡು ಚೂಡಿದಾರ ತೊಟ್ಟು ಹೆಂಡತಿ ಮನೆಗೆ ಹೊರಟ. ಚೂಡಿದಾರದ ಶಾಲನ್ನು ಮುಖಕ್ಕೆ ಮುಚ್ಚಿಕೊಂಡಿದ್ದ.
ಹಾದಿಯಲ್ಲಿ ನಡೆದುಕೊಂಡು ಹೋಗುವಾಗ ಸ್ಥಳೀಯರಿಗೆ ಆತನ ಕಾಲು ನೋಡಿ ಸಂಶಯ ಬಂತು. ಇದೇನು ಮಹಿಳೆ ಪುರುಷನ ಚಪ್ಪಲಿ ಹಾಕಿಕೊಂಡು ಓಡಾಡುತ್ತಿರುವುದು ಎಂದು ಸಂಶಯಗೊಂಡು ಆತನನ್ನು ಹಿಡಿದು ನೋಡಿದಾಗ ಪುರುಷ! ಹಿಗ್ಗಾಮುಗ್ಗ ಥಳಿಸಿದರು. ತಿಂಡಿವನಂ ಪೊಲೀಸರಿಗೊಪ್ಪಿಸಿದರು. ಆಗ ಶೇಖರ್ ನಿಜ ವಿಷಯ ಬಾಯಿಬಿಟ್ಟ. ಸ್ಥಳೀಯ ಜನರಿಗೆ ನಗು ತಡೆಯಲಾಗಲಿಲ್ಲ.
ಆಗಿದ್ದೇನು?: ಶೇಖರ್ ಮತ್ತು ಇಂದ್ರಾ ಎರಡು ವರ್ಷಗಳ ಹಿಂದೆ ಮದುವೆಯಾಗಿದ್ದರು. ಸಿಂಗಾಪೂರದಲ್ಲಿ ಕೂಲಿ ಕೆಲಸ ಮಾಡುತ್ತಿದ್ದ ಶೇಖರ್ ಕೆಲಸ ಇಷ್ಟವಾಗದೆ ಊರಿಗೆ ಮರಳಿದ್ದ. ಅಳಿಯನ ಈ ನಿರ್ಧಾರದಿಂದ ಕುಪಿತಗೊಂಡ ಇಂದ್ರಾಳ ತಾಯಿ ತನ್ನ ಮಗಳನ್ನು ಶೇಖರ್ ಜೊತೆ ಸಂಸಾರ ನಡೆಸಲು ಬಿಡಲಿಲ್ಲ. ಮನೆಗೆ ಕರೆಸಿಕೊಂಡಿದ್ದಳು. ಇಂದ್ರಾ ಕಳೆದೆರಡು ತಿಂಗಳಿಂದ ತಾಯಿ ಮನೆಯಲ್ಲಿಯೇ ವಾಸಿಸುತ್ತಿದ್ದಳು.
ಮೊನ್ನೆ ಶನಿವಾರ ಚೂಡಿದಾರ್ ಧರಿಸಿ ಹೋದ ಶೇಖರ್ ಗೆ ಪತ್ನಿ ಆಕೆಯ ತಾಯಿಯ ಮನೆ ಹತ್ತಿರವೇ ಸಿಕ್ಕಿದಳು. ಅವರು ಶಣ್ಮುಗಂ ಪಿಲ್ಲೈ ರಸ್ತೆಯಲ್ಲಿ ನಡೆದುಕೊಂಡು ಹೋಗುತ್ತಿರುವಾಗ ಯಾರೋ ಆತನ ಕಾಲು ಮತ್ತು ಶಾಲು ಮಚ್ಚಿದ ಮುಖವನ್ನು ಗಮನಿಸಿದರು. ಶೇಖರ್ ಪುರುಷರು ಹಾಕುವ ಚಪ್ಪಲಿಯನ್ನೇ ಹಾಕಿದ್ದ. ಇದನ್ನು ಕಂಡು ಸಂಶಯಗೊಂಡು ನಿಲ್ಲಿಸಿದರು.
ಅಷ್ಟಕ್ಕೂ ಸ್ಥಳೀಯರಿಗೆ ಶೇಖರ್ ಮೇಲೆ ಸಂಶಯ ಮೂಡಲು ಕಾರಣ ಕೆಲ ದಿನಗಳ ಹಿಂದೆ ಅದೇ ಪ್ರದೇಶದಲ್ಲಿ ಶಾಲಾ ಬಾಲಕಿಯೊಬ್ಬಳನ್ನು ಯಾರೋ ಅಪಹರಿಸಲು ಯತ್ನಿಸಿದ್ದರು. ಹಾಗಾಗಿ ಶೇಖರ್ ಮೇಲೆ ಸಂಶಯ ಬಂದು ಮುಖದಿಂದ ಶಾಲು ತೆಗೆಯುವಂತೆ ಹೇಳಿದರು. ನಂತರ ಸ್ಥಳೀಯರಿಗೆ ನಿಜ ವಿಷಯ ಗೊತ್ತಾಯಿತು.
ಭವಿಷ್ಯದಲ್ಲಿ ಈ ರೀತಿ ಮಾಡದಂತೆ ಎಚ್ಚರಿಕೆ ನೀಡಿ ಪೊಲೀಸರು ಶೇಖರ್ ನನ್ನು ಕಳುಹಿಸಿದರು. ಶೇಖರ್ ನ ಈ ನಡತೆ ತಮಿಳಿನ ಖ್ಯಾತ ನಟ ಕಮಲ್ ಹಾಸನ್ ಅವರ ಅವ್ವೈ ಶನ್ಮುಗಿ ಚಿತ್ರದಲ್ಲಿ ಹೆಣ್ಣಿನ ವೇಷ ತೊಟ್ಟು ಚಿತ್ರದುದ್ದಕ್ಕೂ ನಟಿಸಿದ್ದನ್ನು ನೆನಪಿಸುತ್ತದೆ.