ಶ್ರೀನಗರ: ಉಗ್ರ ಕಮಾಂಡರ್ ಬುರ್ಹಾನ್ ವಾನಿ ಹತ್ಯೆ ಬೆನ್ನಲ್ಲೇ ಕಣಿವೆ ರಾಜ್ಯ ಜಮ್ಮು-ಕಾಶ್ಮೀರದಲ್ಲಿ ಭುಗಿಲೆದ್ದಿರುವ ಹಿಂಸಾಚಾರ ಸದ್ಯ ತಣ್ಣಗಾಗುವ ಲಕ್ಷಣ ಕಾಣುತ್ತಿಲ್ಲ. ಹಿಂಸಾಚಾರದಲ್ಲಿ ಮೃತಪಟ್ಟವರ ಸಂಖ್ಯೆ 34ಕ್ಕೇರಿದ್ದು, 1,500ಕ್ಕೂ ಅಧಿಕ ಮಂದಿ ಗಾಯಗೊಂಡಿದ್ದಾರೆ. ಇದು 2010ರಿಂದ ಕಾಶ್ಮೀರದಲ್ಲಿ ನಡೆದ ಹಿಂಸಾಚಾರದಲ್ಲಿ ಅತ್ಯಂತ ಘೋರವಾದದ್ದು ಎಂದು ಹೇಳಲಾಗುತ್ತಿದೆ.
ರಾಜಧಾನಿ ಶ್ರೀನಗರ, ಅನಂತ್ ನಾಗ್, ಗಡಿ ಜಿಲ್ಲೆ ಪುಲ್ವಾಮದಲ್ಲಿಯೂ ಪೊಲೀಸರು ಮತ್ತು ಉದ್ರಿಕ್ತರ ನಡುವಿನ ಸಂಘರ್ಷ ಮುಂದುವರೆದಿದೆ. 300ಕ್ಕೂ ಅಧಿಕ ಸೈನಿಕರು ಹಾಗೂ ಪೊಲೀಸರು ಗಾಯಗೊಂಡಿದ್ದಾರೆ ಎಂದು ತಿಳಿದುಬಂದಿದೆ. ಈ ಮಧ್ಯೆ ಪ್ರತಿಭಟನಾಕಾರರ ಪ್ರತಿಭಟನೆ, ದಾಳಿ ಮುಂದುವರಿಯುತ್ತಿದ್ದರೂ ಉಗ್ರಗಾಮಿಗಳ ವಿರುದ್ಧ ಕಾರ್ಯಾಚರಣೆ ನಿಲ್ಲಿಸದೆ ಮುಂದುವರಿಸುವುದಾಗಿ ಭಾರತ ಹೇಳಿದೆ.