ಚಂಡೀಗಢ: ಶಿಕ್ಷಕರು ಜೀನ್ಸ್ ಪ್ಯಾಂಟ್ ತೊಟ್ಟು ಶಾಲೆಗೆ ಹೋಗಬಾರದು ಎಂದು ನಿಯಮ ಜಾರಿಗೆ ತರಲು ಹೊರಟಿದ್ದ ಹರ್ಯಾಣ ಸರ್ಕಾರ ಇದೀಗ ಮತ್ತೊಂದು ಅಂತಹದ್ದೇ ರೀತಿಯ ಕಾನೂನು ತರಲು ಹೊರಟಿದೆ.
ಹೆಣ್ಣು ಮಕ್ಕಳಿಗೆ ಸುರಕ್ಷತೆ ವಾತಾವರಣ ಕಲ್ಪಿಸಲು ಹೊರಟಿರುವ ರಾಜ್ಯ ಸರ್ಕಾರ 50 ವರ್ಷಕ್ಕಿಂತ ಕೆಳಗಿನ ಪುರುಷ ಶಿಕ್ಷಕರು ಹೆಣ್ಣು ಮಕ್ಕಳಿಗೆ ಪಾಠ ಮಾಡಬಾರದೆಂದು ಕಾನೂನು ತರಲು ಮುಂದಾಗಿದೆ.
40 ವರ್ಷದ ಆಸುಪಾಸಿನಲ್ಲಿರುವ ಮತ್ತು ಅದಕ್ಕಿಂತ ಕಡಿಮೆ ವಯಸ್ಸಿನ ಶಿಕ್ಷಕರು ಹೆಣ್ಣು ಮಕ್ಕಳ ಶಾಲೆಯಲ್ಲಿ ಪಾಠ ಮಾಡಬಾರದು ಎಂದು ರಾಜ್ಯ ಶಿಕ್ಷಣ ಸಚಿವ ರಾಮ್ ಬಿಲಾಸ್ ಶರ್ಮಾ ತಿಳಿಸಿದ್ದಾರೆ.
ಹೆಣ್ಣು ಮಕ್ಕಳ ಸುರಕ್ಷತೆ ದೃಷ್ಟಿಯಿಂದ ಈ ನಿಯಮವನ್ನು ಜಾರಿಗೆ ತರಲಾಗುತ್ತಿದೆ. ಹರ್ಯಾಣ ಸರ್ಕಾರದ ಶಿಕ್ಷಕರ ವರ್ಗಾವಣೆ ನಿಯಮ-2016ರ ಅಡಿಯಲ್ಲಿ ತರಲಾಗಿರುವ ಹೊಸ ನಿಯಮ ಇದಾಗಿದೆ. ಇದರ ಪ್ರಕಾರ ಪುರುಷ ಶಿಕ್ಷಕರಲ್ಲಿ 50 ವರ್ಷ ಮೀರಿದವರು ಮಾತ್ರ ಹೆಣ್ಣು ಮಕ್ಕಳ ಸರ್ಕಾರಿ ಹಿರಿಯ ಮಾಧ್ಯಮಿಕ ಶಾಲೆಗಳಲ್ಲಿ ನೇಮಕಗೊಳ್ಳಬಹುದು.
ಹಿಂದೆ ಹೆಣ್ಣು ಮಕ್ಕಳು ಮತ್ತು ಗಂಡು ಮಕ್ಕಳಿಗೆ ಶೈಕ್ಷಣಿಕ ಸಂಸ್ಥೆ ಒಂದೇ ಆಗಿತ್ತು. ಸ್ವಾಮಿ ದಯಾನಂದ ಸರಸ್ವತಿಯವರ ಶಿಫಾರಸು ಮೇರೆಗೆ ಪ್ರತ್ಯೇಕ ಮಾಡಲಾಯಿತು. ಅವರು ತಮ್ಮ ಪುಸ್ತಕ ಸತ್ಯರ್ಥ ಪ್ರಕಾಶದಲ್ಲಿ, ಹೆಣ್ಣು ಮಕ್ಕಳು ಮತ್ತು ಗಂಡು ಮಕ್ಕಳಿಗೆ ಪ್ರತ್ಯೇಕ ಶಾಲೆಗಳನ್ನು ತೆರೆಯಬೇಕೆಂದು ಹೇಳಿದ್ದರು. ಆ ನಿಯಮವನ್ನು ದೇಶದಾದ್ಯಂತ ಅನುಸರಿಸಲಾಯಿತು ಎಂದು ಶರ್ಮ ವಿವರಿಸಿದರು.
ಜೀವನದ ಹಿಂದೂ ತತ್ತ್ವಶಾಸ್ತ್ರಕ್ಕೆ ಅನುಗುಣವಾಗಿ ಈ ತೀರ್ಮಾನ ಮಾಡಲಾಗಿದೆ. ಹುಡುಗಿಯರು ಒಂದು ವಯಸ್ಸಿಗೆ ಬಂದ ಮೇಲೆ ಅವರ ಬಗ್ಗೆ ವಿಶೇಷ ಕಾಳಜಿ ಇರಬೇಕಾಗುತ್ತದೆ. ಅವರ ಮೇಲೆ ಪುರುಷ ಶಿಕ್ಷಕರ ದೃಷ್ಟಿ ಬೀಳುವ ಸಾಧ್ಯತೆಯಿದೆ ಎಂದು ಸಚಿವರು ಹೇಳಿರುವುದಾಗಿ ಪತ್ರಿಕೆಯೊಂದು ವರದಿ ನೀಡಿದೆ.
ರಾಮ್ ಬಿಲಾಸ್ ಶರ್ಮ ಆರ್ ಎಸ್ಎಸ್ ಮೂಲದವರಾಗಿದೆ. ಕಳೆದ ತಿಂಗಳು ಅವರು ಶಿಕ್ಷಕರು ಜೀನ್ಸ್ ತೊಟ್ಟು ಶಾಲೆಗೆ ಹೋಗಬಾರದು ಎಂಬ ನಿಯಮ ಜಾರಿಗೆ ತರಲು ಹೋಗಿ ವ್ಯಾಪಕ ಟೀಕೆಗೆ ಒಳಗಾಗಿದ್ದರು. ಈ ನಿಯಮಕ್ಕೆ ಪ್ರತಿಪಕ್ಷ ಕಾಂಗ್ರೆಸ್ ಸೇರಿದಂತೆ ಸಾರ್ವಜನಿಕರಿಂದ ವ್ಯಾಪಕ ಟೀಕೆ ಕೇಳಿಬಂದಿದ್ದರಿಂದ ಅದನ್ನು ನಂತರ ಹಿಂಪಡೆಯಲಾಗಿತ್ತು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics