ನವದೆಹಲಿ: ಪ್ರತಿ ವರ್ಷ ಸಂಸತ್ತಿನಲ್ಲಿ ಪ್ರತ್ಯೇಕವಾಗಿ ಮಂಡಿಸುತ್ತಿದ್ದ ರೈಲ್ವೆ ಬಜೆಟ್ ನ 92 ವರ್ಷಗಳ ಸಂಪ್ರದಾಯಕ್ಕೆ ಗುಡ್ ಬೈ ಹೇಳಲು ಕೇಂದ್ರ ಸರ್ಕಾರ ನಿರ್ಧರಿಸಿದ್ದು, ಈ ಸಂಬಂಧ ರೈಲ್ವೆ ಸಚಿವ ಸುರೇಶ್ ಪ್ರಭು ಅವರು ಸರ್ಕಾರಕ್ಕೆ ಪ್ರಸ್ತಾವನೆ ಸಲ್ಲಿಸಿದ್ದಾರೆ.
ಮುಂದಿನ ಹಣಕಾಸು ವರ್ಷದಿಂದ ರೈಲ್ವೆ ಬಜೆಟ್ ಅನ್ನು ಸಾಮಾನ್ಯ ಬಜೆಟ್ ನೊಂದಿಗೆ ವಿಲೀನಗೊಳಿಸುವಂತೆ ಖುದ್ದು ಸುರೇಶ್ ಪ್ರಭು ಅವರು ವಿತ್ತ ಸಚಿವ ಅರುಣ್ ಜೇಟ್ಲಿ ಅವರಿಗೆ ಪತ್ರ ಬರೆದಿದ್ದು, ಪ್ರಧಾನಿ ನರೇಂದ್ರ ಮೋದಿ ಅವರು ಈ ಬಗ್ಗೆ ಅಂತಿಮ ನಿರ್ಧಾರ ತೆಗೆದುಕೊಳ್ಳಲಿದ್ದಾರೆ. ಹೀಗಾಗಿ ಬರುವ ಫೆಬ್ರವರಿಯಲ್ಲಿ 2017-18ನೇ ಸಾಲಿನ ರೈಲ್ವೆ ಬಜೆಟ್ ಮಂಡನೆಯಾಗುವುದು ಅನುಮಾನ.
ರೈಲ್ವೆ ಹಾಗೂ ಹಣಕಾಸು ಬಜೆಟ್‌ಗಳನ್ನು ವಿಲೀನಗೊಳಿಸಬೇಕು ಎಂದು ಕಳೆದ ತಿಂಗಳು ನೀತಿ ಆಯೋಗದ ಸದಸ್ಯ ಬಿಬೇಕ್ ದೇಬ್ರಾಯ್ ಅವರು ಸಲಹೆ ಮಾಡಿದ್ದರು. ಈ ಹಿನ್ನೆಲೆಯಲ್ಲಿ ಪ್ರಧಾನಿ ಕಾರ್ಯಾಲಯ (ಪಿಎಂಒ) ರೈಲ್ವೆ ಸಚಿವರಿಂದ ಪ್ರತಿಕ್ರಿಯೆ ಬಯಸಿತ್ತು. ಕಳೆದ ಜೂನ್‌ನಲ್ಲೇ ಇದಕ್ಕೆ ಉತ್ತರ ನೀಡಿ, ಜೇಟಿÉ ಅವರಿಗೆ ಸುರೇಶ್ ಪ್ರಭು ಪತ್ರ ಬರೆದಿದ್ದಾರೆ.
ರೈಲ್ವೆ ಬಜೆಟ್ ಅನ್ನು ಹಣಕಾಸು ಬಜೆಟ್‌ನಲ್ಲಿ ವಿಲೀನ ಮಾಡುವುದರಿಂದ ರಾಷ್ಟ್ರೀಯ ಸಾರಿಗೆ ನೀತಿ ರೂಪಿಸಲು ಅನುಕೂಲವಾಗುವುದಲ್ಲದೆ, ರೈಲ್ವೆಯನ್ನು ರಾಜಕೀಯ ಒತ್ತಡಗಳಿಂದ ರಕ್ಷಿಸಿದಂತಾಗುತ್ತದೆ ಎಂದು ಅಭಿಪ್ರಾಯ ತಿಳಿಸಿದ್ದಾರೆ. ರೈಲ್ವೆ ಸಚಿವರೇ ಬಜೆಟ್ ವಿಲೀನಕ್ಕೆ ಒಪ್ಪಿಗೆ ಸೂಚಿಸಿರುವ ಹಿನ್ನೆಲೆಯಲ್ಲಿ ಮುಂದಿನ ವರ್ಷ ಪ್ರತ್ಯೇಕ ರೈಲ್ವೆ ಬಜೆಟ್ ಮಂಡನೆ ಮಾಡದೇ, ಹಣಕಾಸು ಮುಂಗಡಪತ್ರದಲ್ಲೇ ಅದನ್ನು ವಿಲೀನಗೊಳಿಸಿ ಮಂಡಿಸುವ ಸಾಧ್ಯತೆ ನಿಚ್ಚಳವಾಗಿದೆ ಎಂದು ಹೇಳಲಾಗಿದೆ.
ಉತ್ತಮ ಆದಾಯ ಹೊಂದಿದ್ದ ಇಲಾಖೆಯಾಗಿದ್ದ ಹಿನ್ನೆಲೆಯಲ್ಲಿ 1924-25ನೇ ಸಾಲಿನಿಂದ ಪ್ರತ್ಯೇಕ ರೈಲ್ವೆ ಮುಂಗಡಪತ್ರ ಮಂಡಿಸುವ ಪರಿಪಾಠ ಆರಂಭವಾಗಿತ್ತು.