ನವದೆಹಲಿ: ಪಂಜಾಬ್ ಹಾಗೂ ಗೋವಾ ವಿಧಾನಸಭಾ ಚುನಾವಣೆಯಲ್ಲಿ ಸ್ಪರ್ಧಿಸಲು ಸಿದ್ಧತೆ ನಡೆಸಿರುವ ಆಮ್ ಆದ್ಮಿ ಪಕ್ಷ ಗುಜರಾತ್ ನಲ್ಲೂ ಚುನಾವಣೆಗೆ ಸ್ಪರ್ಧಿಸುವ ಉತ್ಸಾಹ ತೋರಿದೆ.
ಈ ಬಗ್ಗೆ ಮಾತನಾಡಿರುವ ದೆಹಲಿ ಸಿಎಂ ಅರವಿಂದ್ ಕೇಜ್ರಿವಾಲ್, ಗುಜರಾತ್ ನ ಜನತೆ ಇಚ್ಛಿಸಿದಲ್ಲಿ ಆಮ್ ಆದ್ಮಿ ಪಕ್ಷ ಗುಜರಾತ್ ಚುನಾವಣೆಗೆ ಸ್ಪರ್ಧಿಸಲಿದೆ ಎಂದು ಹೇಳಿದ್ದಾರೆ. ಚುನಾವಣೆಗೆ ಪಕ್ಷ ಸ್ಪರ್ಧಿಸುವುದಿಲ್ಲ. ರಾಜ್ಯದ ಜನತೆ ಆಮ್ ಆದ್ಮಿ ಪಕ್ಷದ ಪರ ಚುನಾವಣೆ ಎದುರಿಸುತ್ತಾರೆ. ದೆಹಲಿಯಲ್ಲೂ ಅಲ್ಲಿನ ಜನತೆಯೇ ಹಣ ಖರ್ಚು ಮಾಡಿ ನಮ್ಮನ್ನು ಅಧಿಕಾರಕ್ಕೆ ತಂದಿದ್ದಾರೆ ಎಂದು ಟಾಕ್ ಟು ಅರವಿಂದ್ ಕೇಜ್ರಿವಾಲ್ ವೇದಿಕೆಯಲ್ಲಿ ಕೇಜ್ರಿವಾಲ್ ಹೇಳಿದ್ದಾರೆ.
ದೆಹಲಿ ಜನತೆಯಂತೆಯೇ ಗುಜರಾತ್ ನ ಜನತೆ ಸಹ ಆಮ್ ಆದ್ಮಿ ಪಕ್ಷ ಚುನಾವಣೆಗೆ ಸ್ಪರ್ಧಿಸಬೇಕೆಂಬ ಇಚ್ಛೆ ಹೊಂದಿದ್ದರೆ, ಗುಜರಾತ್ ಚುನಾವಣೆಗೆ ಆಪ್ ಸ್ಪರ್ಧಿಸಲಿದೆ ಎಂದು ಕೇಜ್ರಿವಾಲ್ ಸಾರ್ವಜನಿಕರೊಂದಿಗಿನ ಸಂವಹನ ಕಾರ್ಯಕ್ರಮದಲ್ಲಿ ಹೇಳಿದ್ದಾರೆ. ಗುಜರಾತ್ ನಲ್ಲಿ ಚುನಾವಣೆಗೆ ಸ್ಪರ್ಧಿಸುವ ಬಗ್ಗೆ ಇನ್ನೆರಡು ತಿಂಗಳಲ್ಲಿ ಗುಜರಾತ್ ಆಮ್ ಆದ್ಮಿ ಪಕ್ಷದೊಂದಿಗೆ ಚರ್ಚೆ ನಡೆಸುವುದಾಗಿ ಕೇಜ್ರಿವಾಲ್ ಮಾಹಿತಿ ನೀಡಿದ್ದಾರೆ.