ದೇಶ

ಪಹಲ್ಗಾಮ್ ಮೂಲಕ ಅಮರನಾಥ ಯಾತ್ರೆ ಆರಂಭ

Sumana Upadhyaya
ಜಮ್ಮು: ದಕ್ಷಿಣ ಕಾಶ್ಮೀರದ ಪಹಲ್ಗಾಮ್ ಮಾರ್ಗದ ಮೂಲಕ ಅಮರನಾಥ ಯಾತ್ರೆ ಮತ್ತೆ ಸೋಮವಾರ ಆರಂಭಗೊಂಡಿದೆ. ಜುಲೈ 9ರಂದು ಹಿಜ್ ಬುಲ್ ಮುಜಾಹಿದ್ದೀನ್ ಕಮಾಂಡರ್ ಬುರ್ಹಾನ್ ವಾನಿಯ ಹತ್ಯೆಯ ಖಂಡಿಸಿ ಕಣಿವೆ ರಾಜ್ಯದಲ್ಲಿ ನಡೆದ ವ್ಯಾಪಕ ಹಿಂಸಾಚಾರ ಹಿನ್ನೆಲೆಯಲ್ಲಿ ಅಮರನಾಥ ಯಾತ್ರೆಯನ್ನು ಸ್ಥಗಿತಗೊಳಿಸಲಾಗಿತ್ತು. 
ಶ್ರೀ ಅಮರನಾಥಜೀ ದೇವಸ್ಥಾನ ಮಂಡಳಿಯ ಅಧಿಕಾರಿಯೊಬ್ಬರು ಸುದ್ದಿ ಸಂಸ್ಥೆಗೆ ಮಾಹಿತಿ ನೀಡಿ, ಸಾಂಪ್ರದಾಯಿಕ ಪಹಲ್ಗಾಮ್ ಮಾರ್ಗದ ಮೂಲಕ ಅಮರನಾಥ ಯಾತ್ರೆ ಮತ್ತೆ ಸೋಮವಾರ ಆರಂಭಗೊಂಡಿದೆ ಎಂದು ತಿಳಿಸಿದ್ದಾರೆ.
ಜುಲೈ 9ರ ಘಟನೆ ನಂತರ ಕಾನೂನು, ಸುವ್ಯವಸ್ಥೆ ಕಾರಣದಿಂದಾಗಿ ಉತ್ತರ ಕಾಶ್ಮೀರದ ಬಲ್ತಾಲ್ ಮಾರ್ಗದ ಮೂಲಕ ಮಾತ್ರ ಯಾತ್ರೆಯನ್ನು ಮುಂದುವರಿಸಲಾಗಿತ್ತು. 
ಜುಲೈ 2ರಂದು ಯಾತ್ರೆ ಆರಂಭಗೊಂಡಲ್ಲಿಂದ ಇದುವರೆಗೆ 1 ಲಕ್ಷದ 72 ಸಾವಿರದ 851 ಯಾತ್ರಿಕರು ಅಮರನಾಥ ಗುಹೆಯ ಶಿವ ದೇವಾಲಯಕ್ಕೆ ಭೇಟಿ ನೀಡಿದ್ದಾರೆ. ನಿನ್ನೆ ಸುಮಾರು 4 ಸಾವಿರದ 510 ಮಂದಿ ಭಕ್ತರು ದೇವಾಲಯಕ್ಕೆ ಭೇಟಿ ನೀಡಿ ಪ್ರಾರ್ಥನೆ ಸಲ್ಲಿಸಿದ್ದರು. 
ನೈಸರ್ಗಿಕ ವಿಕೋಪದಿಂದಾಗಿ ಈ ವರ್ಷ ಇಲ್ಲಿಯವರೆಗೆ 12 ಮಂದಿ ಯಾತ್ರಿಕರು ಮೃತಪಟ್ಟಿದ್ದಾರೆ. 
48 ದಿನಗಳ ಅಮರನಾಥ ಯಾತ್ರೆ ಆಗಸ್ಟ್ 17ರಂದು ಮುಕ್ತಾಯವಾಗಲಿದೆ. ಅಂದು ಶ್ರಾವಣ ಪೂರ್ಣಿಮ ಮತ್ತು ರಕ್ಷಾ ಬಂಧನ ಹಬ್ಬಗಳಿವೆ.
SCROLL FOR NEXT