ಸುನಂದಾ ಪುಷ್ಕರ್-ಶಶಿ ತರೂರ್, ಬಲ ಚಿತ್ರದಲ್ಲಿ ಮೆಹರ್ ತರಾರ್(ಸಂಗ್ರಹ ಚಿತ್ರ)
ನವದೆಹಲಿ: ಕಾಂಗ್ರೆಸ್ ಸಂಸದ ಶಶಿ ತರೂರ್ ಅವರ ಪತ್ನಿ ಸುನಂದಾ ಪುಷ್ಕರ್ ಸಾಯುವುದಕ್ಕೆ ಕೆಲ ಗಂಟೆಗಳ ಮೊದಲು ಟ್ವಿಟ್ಟರ್ ನಲ್ಲಿ ಆಕೆಯೊಂದಿಗೆ ಜಗಳ ಮಾಡಿಕೊಂಡ ಪ್ರಕರಣಕ್ಕೆ ಸಂಬಂಧಪಟ್ಟಂತೆ ಪಾಕಿಸ್ತಾನ ಪತ್ರಕರ್ತೆ ಮೆಹರ್ ತರಾರ್ ರನ್ನು ದೆಹಲಿ ಪೊಲೀಸರು ವಿಚಾರಣೆ ನಡೆಸಿದ್ದಾರೆ.
ತರಾರ್ ಬಯಸಿದ ಸ್ಥಳವಾದ ದೆಹಲಿಯ ಪ್ರಮುಖ ಹೊಟೇಲೊಂದರಲ್ಲಿ ಕಳೆದ ಫೆಬ್ರವರಿಯಲ್ಲಿ ಪೊಲೀಸರು ವಿಚಾರಣೆ ನಡೆಸಿದ್ದರು. ಕೇಸಿನ ಬಗ್ಗೆ ತನಿಖೆ ನಡೆಸುತ್ತಿರುವ ವಿಶೇಷ ತನಿಖಾ ತಂಡದಿಂದ ಮಹಿಳಾ ಪೊಲೀಸ್ ಸಿಬ್ಬಂದಿಯ ಸಮ್ಮುಖದಲ್ಲಿ ಮೆಹರ್ ತರಾರ್ ರನ್ನು ವಿಚಾರಣೆ ನಡೆಸಲಾಯಿತು ಎಂದು ಮೂಲಗಳು ಇಂದು ತಿಳಿಸಿವೆ.
ತರಾರ್ ಪಾಕಿಸ್ತಾನದ ಪ್ರಜೆಯಾಗಿರುವುದರಿಂದ ಅವರ ವಿರುದ್ಧ ಸಮ್ಮನ್ಸ್ ಜಾರಿ ಮಾಡಿಲ್ಲ. ಆದರೆ ತಾನು ತನಿಖೆಗೆ ಸಿದ್ಧ ಎಂಬುದನ್ನು ಹಿರಿಯ ಪೊಲೀಸ್ ಅಧಿಕಾರಿಗಳಿಗೂ ತಿಳಿಸಿದ್ದಳು.
51 ವರ್ಷದ ಸುನಂದಾ ಪುಷ್ಕರ್ ದಕ್ಷಿಣ ದೆಹಲಿಯ ಫೈವ್ ಸ್ಟಾರ್ ಹೊಟೇಲೊಂದರಲ್ಲಿ ಜನವರಿ 17, 2014ರಂದು ಸಾವನ್ನಪ್ಪಿದ್ದರು. ಅದಕ್ಕೆ ಒಂದು ದಿನ ಮುಂಚೆ, ಶಶಿ ತರೂರ್ ಜೊತೆ ಮೆಹರ್ ಅಕ್ರಮ ಸಂಬಂಧ ಹೊಂದಿದ್ದಾರೆ ಎಂಬ ವಿಚಾರಕ್ಕೆ ಸಂಬಂಧಿಸಿದಂತೆ ಇಬ್ಬರ ನಡುವೆ ಟ್ವಿಟ್ಟರ್ ನಲ್ಲಿ ಜಗಳವಾಗಿತ್ತು.
ಕಾಂಗ್ರೆಸ್ ನಾಯಕ ಶಶಿ ತರೂರ್ ಮತ್ತು ಅವರ ಪತ್ನಿಯ ಜೊತೆ ಯಾವ ರೀತಿಯ ಸಂಬಂಧ ಹೊಂದಿದ್ದೀರಿ, ಟ್ವಿಟ್ಟರ್ ನಲ್ಲಿ ಜಗಳ, ಸುನಂದಾ ಅವರ ರಹಸ್ಯ ಸಾವಿನ ಕುರಿತಂತೆ ತನಿಖಾಧಿಕಾರಿಗಳು ಮೆಹರ್ ನನ್ನು ತನಿಖೆ ನಡೆಸಿದ್ದಾರೆ. ತರೂರ್ ಮತ್ತು ಸುನಂದಾ ಜೊತೆ ತಮಗೆ ಯಾವುದೇ ವೈಯಕ್ತಿಕ ಸಂಪರ್ಕವಿರಲಿಲ್ಲ ಎಂದು ಮೆಹರ್ ಹೇಳಿದ್ದಾರೆ ಎಂದು ತಿಳಿದುಬಂದಿದೆ.
ಎರಡು ಗಂಟೆಗೂ ಹೆಚ್ಚು ಕಾಲ ನಡೆದ ತನಿಖೆ ವೇಳೆ ಸಿದ್ಧಪಡಿಸಿದ ಪ್ರಶ್ನೆಗಳನ್ನು ನೀಡಿ ಅದಕ್ಕೆ ಉತ್ತರಿಸುವಂತೆ ಕೋರಿದ್ದರು. ತರರ್ ಅವರ ಬಗ್ಗೆ ಪತ್ರಕರ್ತೆ ನಳಿನಿ ಸಿಂಗ್ ಕೂಡ ಪ್ರಸ್ತಾಪಿಸಿದ್ದಾರೆ. ನಳಿನಿ ಸಿಂಗ್ ಸುನಂದಾ ಸಾಯುವುದಕ್ಕೆ ಕೆಲವೇ ಗಂಟೆಗಳ ಮುನ್ನ ದೂರವಾಣಿ ಮೂಲಕ ಮಾತನಾಡಿದ್ದರು. ತರೂರ್ ಮತ್ತು ಮೆಹರ್ ತರಾರ್ ನಡುವಿನ ನಿಕಟ ಸಂಬಂಧ ತಮಗೆ ಇಷ್ಟವಾಗುತ್ತಿಲ್ಲ. ಅವರಿಬ್ಬರೂ ದುಬೈಯಲ್ಲಿ ಭೇಟಿಯಾಗಿದ್ದು ತನಗೆ ಅಸಮಾಧಾನ ತಂದಿದೆ ಎಂಬುದನ್ನು ಸುನಂದಾ ತಮಗೆ ಹೇಳಿದ್ದರು ಎಂದು ನಳಿನಿ ಸಿಂಗ್ ತಿಳಿಸಿದ್ದಾರೆ.
ಕಳೆದ ವರ್ಷ ಜನವರಿಯಲ್ಲಿ ದೆಹಲಿ ಪೊಲೀಸರು ಸುನಂದಾ ಸಾವಿನ ಪ್ರಕರಣಕ್ಕೆ ಸಂಬಂಧಪಟ್ಟಂತೆ ಕೊಲೆ ಕೇಸನ್ನು ದಾಖಲಿಸಿದ್ದರು. ಇದಕ್ಕೂ ಮುನ್ನ ವರದಿ ನೀಡಿದ್ದ ದೆಹಲಿಯ ಎಮ್ಸ್ ಸಂಸ್ಥೆ ವಿಷ ಸೇವನೆ ಸುನಂದಾ ಆತ್ಮಹತ್ಯೆಗೆ ಕಾರಣ ಎಂದು ವರದಿ ನೀಡಿತ್ತು. ಆ ಬಳಿಕ ಪೊಲೀಸರು ಸುನಂದಾ ಅವರ ಗುಪ್ತ ಅಂಗಗಳ ಮಾದರಿಯನ್ನು ಅಮೆರಿಕಕ್ಕೆ ವಿಧಿವಿಜ್ಞಾನ ಪ್ರಯೋಗಾಲಯಕ್ಕೆ ಕಳುಹಿಸಿದ್ದರು.ಆ ವರದಿಯು ದೆಹಲಿಯ ಏಮ್ಸ್ ಆಸ್ಪತ್ರೆಯ ವರದಿ ರೀತಿಯಲ್ಲಿಯೇ ಇತ್ತು. ವರದಿಯಿಂದ ಸಾವಿಗೆ ನಿಖರ ಕಾರಣವೇನೆಂಬ ನಿರ್ಧಾರಕ್ಕೆ ಬರಲು ಸಾಧ್ಯವಾಗದೆ ಏಮ್ಸ್ ಆಸ್ಪತ್ರೆಯ ವೈದ್ಯಕೀಯ ಮಂಡಳಿಗೆ ವರದಿಯಲ್ಲಿನ ವಿಷಯಗಳನ್ನು ವಿಶ್ಲೇಷಿಸುವಂತೆ ದೆಹಲಿ ಪೊಲೀಸರು ಮನವಿ ಮಾಡಿದ್ದರು.
ಸುನಂದಾ ಪುಷ್ಕರ್ ಸಾವಿನ ಪ್ರಕರಣಕ್ಕೆ ಸಂಬಂಧಪಟ್ಟಂತೆ ಇದುವರೆಗೆ ಹಲವರನ್ನು ವಿಚಾರಣೆ ನಡೆಸಲಾಗಿದೆ. ಶಶಿ ತರೂರ್, ಅವರ ಮನೆ ಕೆಲಸಗಾರ ನಾರಾಯಣ್ ಸಿಂಗ್, ಚಾಲಕ ಬಜ್ರಂಗಿ ಮತ್ತು ಇಬ್ಬರಿಗೂ ಆಪ್ತರಾಗಿದ್ದ ಸಂಜಯ್ ದೆವನ್ ಅವರ ಮೇಲೆ ಪಾಲಿಗ್ರಾಫ್ ಪರೀಕ್ಷೆ ನಡೆಸಲಾಗಿದೆ.