ಶ್ರೀನಗರ: ಜಮ್ಮು-ಕಾಶ್ಮೀರದ ಪ್ರಧಾನ ವಿಪಕ್ಷವಾಗಿರುವ ನ್ಯಾಷನಲ್ ಕಾನ್ಫರೆನ್ಸ್ ಪಕ್ಷ, ಕಾಶ್ಮೀರ ವಿಷಯದಲ್ಲಿ ಪ್ರತ್ಯೇಕತಾವಾದಿಗಳು ಹಾಗೂ ಪಾಕಿಸ್ತಾನದೊಂದಿಗೆ ನಿರಂತರ ಸಂಭಾಷಣೆ ನಡೆಸುವಂತೆ ಕೇಂದ್ರ ಸರ್ಕಾರಕ್ಕೆ ಸಲಹೆ ನೀಡಿದೆ.
ರಾಜಕೀಯ ವಿಷಯಕ್ಕೆ ಸಂಬಂಧಿಸಿದಂತೆ ಪರಸ್ಪರ ಒಪ್ಪುಗೆಯಾವುವಂತಹ ಒಮ್ಮತದ ತೀರ್ಮಾನಕ್ಕೆ ಬರಲು ಕೇಂದ್ರ ಸರ್ಕಾರ ಪ್ರತ್ಯೇಕತಾವಾದಿಗಳೊಂದಿಗೆ ಹಾಗೂ ಪಾಕಿಸ್ತಾನದೊಂದಿಗೆ ನಿರಂತರ ಸಂಭಾಷಣೆ ನಡೆಸುವುದು ಅಗತ್ಯವಿದೆ ಎಂದು ಎನ್ ಸಿ ಅಧ್ಯಕ್ಷರೂ ಆಗಿರುವ ಮಾಜಿ ಸಿಎಂ ಒಮರ್ ಅಬ್ದುಲ್ಲಾ ಅಭಿಪ್ರಾಯಪಟ್ಟಿದ್ದಾರೆ.
ಕಾಶ್ಮೀರ ಗಲಭೆ ಪ್ರಕರಣದ ಬಗ್ಗೆಯೂ ಪ್ರತಿಕ್ರಿಯೆ ನೀಡಿರುವ ಒಮರ್ ಅಬ್ದುಲ್ಲಾ, ಕಣಿವೆಯಲ್ಲಿ ಉಂಟಾಗಿರುವ ಪರಿಸ್ಥಿತಿಯನ್ನು ಕೇವಲ ಕಾನೂನು ಮತ್ತು ಸುವ್ಯವಸ್ಥೆಯ ಸಮಸ್ಯೆ ಎಂದು ಹೇಳುವುದು ಸೂಕ್ತವಲ್ಲ ಎಂದು ಎನ್ ಸಿ ಹೇಳಿದೆ. ಕಣಿವೆ ರಾಜ್ಯದ ಪರಿಸ್ಥಿತಿಯನ್ನು ಪರಿಶೀಲಿಸಲು ಕಾಶ್ಮೀರಕ್ಕೆ ಭೇಟಿ ನೀಡಿರುವ ಗೃಹ ಸಚಿವ ರಾಜನಾಥ್ ಸಿಂಗ್ ಗೆ ಮನವಿ ಪತ್ರ ಸಲ್ಲಿಸಿರುವ ನ್ಯಾಷನಲ್ ಕಾನ್ಫರೆನ್ಸ್, ಕಾಶ್ಮೀರ ಸಮಸ್ಯೆಯನ್ನು ರಾಜಕೀಯ ಸಮಸ್ಯೆ ಎಂಬುದನ್ನು ಅರಿಯಲು ಕೇಂದ್ರ ಸರ್ಕಾರ ವಿಫಲವಾಗುತ್ತಿದ್ದು, ಕಾಶ್ಮೀರ ಸಮಸ್ಯೆಗೆ ಆಂತರಿಕ ಹಾಗೂ ಬಾಹ್ಯ ರಾಜಕೀಯ ತೊಡಗಿಸಿಕೊಳ್ಳುವಿಕೆ ಅಗತ್ಯವಿದೆ ಎಂಬುದನ್ನು ಅರ್ಥಮಾಡಿಕೊಳ್ಳುತ್ತಿಲ್ಲ ಎಂದು ಅಸಮಾಧಾನ ವ್ಯಕ್ತಪಡಿಸಿದೆ. ಕಾಶ್ಮೀರದಲ್ಲಿ ರಾಜಕೀಯದೊಂದಿಗೆ ವ್ಯವಹರಿಸುವ ರೀತಿ ಹೀಗೆಯೇ ಮುಂದುವರೆದರೆ, ಇದು ಮುಂದಿನ ದಿನಗಳಲ್ಲಿ ಕಾಶ್ಮೀರ ಜನತೆಯ ಹಿತಾಸಕ್ತಿಗೆ ಮಾರಕವಾಗಿ ಪರಿಣಮಿಸಲಿದೆ ಎಂದು ಎನ್ ಸಿ ಎಚ್ಚರಿಕೆ ನೀಡಿದ್ದು, ಉಗ್ರ ವನಿ ಹತ್ಯೆಯನ್ನು ಖಂಡಿಸಿ ನಡೆದ ಪ್ರತಿಭಟನೆ ಪರಿಸ್ಥಿತಿಯನ್ನು ನಿಭಾಯಿಸುವಲ್ಲಿ ಪಿಡಿಪಿ- ಬಿಜೆಪಿ ಮೈತ್ರಿ ಸರ್ಕಾರ ವಿಫಲವಾಗಿದೆ ಎಂದು ಅಸಮಾಧಾನ ವ್ಯಕ್ತಪಡಿಸಿದೆ.