ಪ್ರತ್ಯೇಕತಾವಾದಿಗಳೊಂದಿಗೆ ಬೇಷರತ್ ಮಾತುಕತೆ ನಡೆಸಿ: ಕೇಂದ್ರಕ್ಕೆ ಸಿಪಿಐಎಂ ಸಲಹೆ
ಭಿನ್ನಮತೀಯರೊಂದಿಗೆ ಕೇಂದ್ರ ಸರ್ಕಾರ ಬೇಷರತ್ ಮಾತುಕತೆಗೆ ಮುಂದಾಗಬೇಕೆಂದು ಸಿಪಿಐ-ಎಂ ನಾಯಕ ಮೊಹಮ್ಮದ್ ಯುಸೂಫ್ ತರಿಗಾಮಿ ಕರೆ ನೀಡಿದ್ದಾರೆ.
ಶ್ರೀನಗರ: ಜಮ್ಮು-ಕಾಶ್ಮೀರಕ್ಕೆ ಸಂಬಂಧಿಸಿದ ಪ್ರತಿಯೊಬ್ಬರೊಂದಿಗೂ, ಪ್ರಮುಖವಾಗಿ ಭಿನ್ನಮತೀಯರೊಂದಿಗೆ ಕೇಂದ್ರ ಸರ್ಕಾರ ಬೇಷರತ್ ಮಾತುಕತೆಗೆ ಮುಂದಾಗಬೇಕೆಂದು ಸಿಪಿಐ-ಎಂ ನಾಯಕ ಮೊಹಮ್ಮದ್ ಯುಸೂಫ್ ತರಿಗಾಮಿ ಕರೆ ನೀಡಿದ್ದಾರೆ.
ಕಾಶ್ಮೀರಕ್ಕೆ ಭೇಟಿ ನೀಡಿರುವ ಗೃಹ ಸಚಿವ ರಾಜನಾಥ್ ಸಿಂಗ್ ಅವರನ್ನು ಭೇಟಿ ಮಾಡಿರುವ ಜಮ್ಮು-ಕಾಶ್ಮೀರದ ಏಕೈಕ ಕಮ್ಯುನಿಷ್ಟ್ ಶಾಸಕರಾಗಿರುವ ಮೊಹಮ್ಮದ್ ಯುಸೂಫ್, ಕಾಶ್ಮೀರದಲ್ಲಿ ಅಮಾಯಕರು ಸಾವನ್ನಪ್ಪುವುದಕ್ಕೆ ಅಧಿಕಾರಿಗಳ ವಿರುದ್ಧ ಆರೋಪ ಮಾಡಿದ್ದು, ತಕ್ಷಣವೇ ಸೇನೆಯನ್ನು ವಾಪಸ್ ಕರೆಸಿಕೊಳ್ಳಬೇಕೆಂದು ಮನವಿ ಮಾಡಿದ್ದಾರೆ.
ಭೇಟಿ ನಂತರ ಪ್ರತಿಕ್ರಿಯೆ ನೀಡಿರುವ ಯುಸೂಫ್, ಪ್ರತ್ಯೇಕತಾವಾದಿಗಳೂ ಸೇರಿದಂತೆ ಕಾಶ್ಮೀರಕ್ಕೆ ಸಂಬಂಧಿಸಿದ ಪ್ರತಿಯೊಂದು ಸಂಘಟನೆಯೊಂದಿಗೂ ಕೇಂದ್ರ ಸರ್ಕಾರ ಬೇಷರತ್ ಮಾತುಕತೆಗೆ ಮುಂದಾಗಬೇಕೆಂದು ರಾಜನಾಥ್ ಸಿಂಗ್ ಅವರನ್ನು ಒತ್ತಾಯಿಸಿರುವುದಾಗಿ ತಿಳಿಸಿದ್ದಾರೆ. ಕಾಶ್ಮೀರದ ಜನತೆಗೆ ತಮ್ಮನ್ನು ನಿರ್ಲಕ್ಷಿಸಲಾಗುತ್ತಿದೆ ಎಂದು ಭಾವಿಸಿದ್ದು, ತಮಗೆ ನೀಡಲಾಗಿರುವ ಭರವಸೆಗಳನ್ನು ಈಡೇರಿಸಲಾಗುತ್ತಿಲ್ಲ ಎಂಬ ವಿಷಯವನ್ನು ರಾಜನಾಥ್ ಸಿಂಗ್ ಗಮನಕ್ಕೆ ತಂದಿದ್ದಾರೆ. ಕೇಂದ್ರದಲ್ಲಿ ಆಡಳಿತ ನಡೆಸುತ್ತಿರುವವರು, ಕಾಶ್ಮೀರದ ಪರಿಸ್ಥಿತಿಯನ್ನು ಅರ್ಥ ಮಾಡಿಕೊಳ್ಳಬೇಕೆಂದು ಮೊಹಮ್ಮದ್ ಯುಸೂಫ್ ತರಿಗಾಮಿ ಹೇಳಿದ್ದಾರೆ.