ಹೈದರಾಬಾದ್: ನಿರ್ಮಾಣ ಹಂತದಲ್ಲಿದ್ದ ಎರಡಂತಸ್ತಿನ ಕಟ್ಟದ ಕುಸಿದು ಬಿದ್ದ ಪರಿಣಾಮ ಕಾರ್ಮಿಕರಿಬ್ಬರು ಸಾವನ್ನಪ್ಪಿರುವ ಘಟನೆ ಹೈದರಾಬಾದ್ ನಲ್ಲಿ ಸಂಭವಿಸಿದೆ.
ಹೈದರಾಬಾದಿನ ಫಿಲಂ ನಗರದಲ್ಲಿ ನಿರ್ಮಾಣ ಹಂತದಲ್ಲಿದ್ದ ಕಟ್ಟಡ ಭಾನುವಾರ ಕುಸಿದುಬಿದ್ದಿದೆ. ಕಟ್ಟದ ಕುಸಿತದಲ್ಲಿ ಇಬ್ಬರು ಮೃತಪಟ್ಟಿದ್ದು, ಎಂಟು ಕಾರ್ಮಿಕರಿಗೆ ಗಂಭೀರ ಗಾಯಗಳಾಗಿವೆ. ಇನ್ನು ಅವಶೇಷಗಳಡಿಯಲ್ಲಿ ಮೂವರು ಸಿಲುಕಿರುವ ಶಂಕೆ ಹಿನ್ನೆಲೆ ಗ್ರೇಟರ್ ಹೈದರಾಬಾದ್ ಮುನ್ಸಿಪಲ್ ಕಾರ್ಪೋರೇಷನ್ ಹಾಗೂ ರಾಷ್ಟ್ರೀಯ ವಿಪತ್ತು ನಿರ್ವಹಣಾ ಪಡೆ ರಕ್ಷಣಾ ಕಾರ್ಯಾಚರಣೆಯಲ್ಲಿ ತೊಡಗಿವೆ.
ಮೃತರನ್ನು ಕೊಲ್ಕತ್ತಾ ಮೂಲದ ಅನ್ಸರ್ ಶೇಖ್ ಮತ್ತು ಹೈದರಾಬಾದಿನ ಆನಂದ್ ಎಂದು ಗುರುತಿಸಲಾಗಿದೆ. ಇನ್ನು ಗಾಯಗೊಂಡಿದ್ದ ಎಂಟು ಮಂದಿಯನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.