ನವದೆಹಲಿ: ರಾಜ್ಯಸಭಾ ಸದಸ್ಯ ಸ್ಥಾನಕ್ಕೆ ರಾಜೀನಾಮೆ ನೀಡಿರುವ ಬಿಜೆಪಿ ನಾಯಕ ನವಜೋತ್ ಸಿಂಗ್ ಸಿಧು, ತಾವು ರಾಜೀನಾಮೆ ನೀಡಿರುವುದಕ್ಕೆ ಕಾರಣ ಬಹಿರಂಗಪಡಿಸಿದ್ದಾರೆ.
ಪತ್ರಿಕಾಗೋಷ್ಠಿಯನ್ನುದ್ದೇಶಿಸಿ ಮಾತನಾಡಿರುವ ಸಿಧು, ಸದ್ಯದಲ್ಲೇ ವಿಧಾನಸಭಾ ಚುನಾವಣೆ ಎದುರಿಸಲಿರುವ ಪಂಜಾಬ್ ನಿಂದ ದೂರ ಉಳಿಯುವಂತೆ ನನಗೆ ಸೂಚನೆ ನೀಡಲಾಗಿತ್ತು. ಆದ್ದರಿಂದ ರಾಜ್ಯಸಭಾ ಸದಸ್ಯ ಸ್ಥಾನಕ್ಕೆ ರಾಜೀನಾಮೆ ನೀಡಿದೆ ಎಂದು ಹೇಳಿದ್ದಾರೆ.
ನನಗೆ ನಾಲ್ಕು ಬಾರಿ ಮತ ಹಾಕಿ ಆಯ್ಕೆ ಮಾಡಿದ ಜನರನ್ನು ನಾನು ಹೇಗೆ ತೊರೆಯಲಿ ಎಂದು ನವಜೋತ್ ಸಿಂಗ್ ಸಿಧು ಪ್ರಶ್ನಿಸಿದ್ದು, ರಾಜ್ಯಸಭಾ ಸದಸ್ಯತ್ವ ಸ್ಥಾನ ತೊರೆದರೆ ಅದು ಬಿಜೆಪಿಯನ್ನು ತೊರೆದಂತೆಯೇ, ನಿರ್ಧಾರ ಬದಲಾಯಿಸುವುದಿಲ್ಲ. ಮಾತನ್ನು ಎಂದಿಗೂ ತಪ್ಪುವುದಿಲ್ಲ, ಪಂಜಾಬ್ ಗೆ ಸೇವೆ ಸಲ್ಲಿಸಿಯೇ ಸಿದ್ಧ ಎಂದು ನವಜೋತ್ ಸಿಂಗ್ ಸಿಧು ಹೇಳಿದ್ದಾರೆ. ಪ್ರಧಾನಿ ನರೇಂದ್ರ ಮೋದಿ ಅವರ ಆಣತಿಯಂತೆ ಪಂಜಾಬ್ ನ ಹಿತದೃಷ್ಟಿಯಿಂದ ರಾಜ್ಯಸಭಾ ಸದಸ್ಯತ್ವವನ್ನು ಒಪ್ಪಿಕೊಂಡಿದ್ದೆ, ಆದರೆ ಪಂಜಾಬ್ ವ್ಯವಹಾರಗಳಿಂದ ದೂರ ಉಳಿಯುವಂತೆ ನನಗೆ ಸೂಚಿಸಿದ್ದರಿಂದ ನಾನು ರಾಜೀನಾಮೆ ನೀಡುತ್ತಿದ್ದೇನೆ ಎಂದು ನವಜೋತ್ ಸಿಂಗ್ ಸಿಧು ಹೇಳಿದ್ದಾರೆ. ಜುಲೈ 18 ರಂದು ರಾಜ್ಯಸಭಾ ಸದಸ್ಯ ಸ್ಥಾನಕ್ಕೆ ರಾಜೀನಾಮೆ ನೀಡಿದ್ದ ನವಜೋತ್ ಸಿಂಗ್ ಆಮ್ ಆದ್ಮಿ ಪಕ್ಷ ಸೇರುತ್ತಾರೆ ಎಂಬ ವದಂತಿಗಳಿವೆ.