ನವದೆಹಲಿ: ಭ್ರೂಣವು ಅಸಹಜ ಸ್ಥಿತಿಯಲ್ಲಿರುವ ಕಾರಣಕ್ಕೆ ಗರ್ಭಧರಿಸಿ 24 ವಾರ ಕಳೆದಿರುವ ಅತ್ಯಾಚಾರ ಸಂತ್ರಸ್ತೆಗೆ ಗರ್ಭಪಾತ ಮಾಡಿಸಿಕೊಳ್ಳಲು ಸೋಮವಾರ ಸುಪ್ರೀಂ ಕೋರ್ಟ್ ಅನುಮತಿ ನೀಡಿದೆ.
ಅತ್ಯಾಚಾರ ಸಂತ್ರಸ್ತೆಯ ಭ್ರೂಣವು ಅಸಹಜ ಸ್ಥಿತಿಯಲ್ಲಿರುವುದಾಗಿ ವೈದ್ಯಕೀಯ ವರದಿ ಖಚಿತಪಡಿಸಿದ ನಂತರ ಸುಪ್ರೀಂ ಕೋರ್ಟ್ ಗರ್ಭಪಾತಕ್ಕೆ ಅನುಮತಿ ನೀಡಿದೆ.
ಈ ಸಂಬಂಧ ಕಳೆದ ವಾರ ಕೋರ್ಟ್ ಅತ್ಯಾಚಾರ ಸಂತ್ರಸ್ತೆಯ ವೈದ್ಯಕೀಯ ಪರೀಕ್ಷೆ ನಡೆಸುವಂತೆ ಮುಂಬೈನ ಕೆಇಎಂ ಆಸ್ಪತ್ರೆಗೆ ಸೂಚಿಸಿತ್ತು. ಆ ಪ್ರಕಾರ ಆಸ್ಪತ್ರೆಯು ಇಂದು ಕೋರ್ಟಿಗೆ ತನ್ನ ವೈದ್ಯಕೀಯ ವರದಿಯನ್ನು ಸಲ್ಲಿಸಿತು. ವರದಿಯಲ್ಲಿ ತಜ್ಞ ವೈದ್ಯರು, ಅಸಹಜ ಸ್ಥಿತಿಯಲ್ಲಿರುವ ಈ ಭ್ರೂಣವನ್ನು ಒಂದೊಮ್ಮೆ ಮಹಿಳೆಯು ತನ್ನೊಳಗೆ ಮುಂದುವರಿಯಬಿಟ್ಟಲ್ಲಿ ಅದರಿಂದ ಆಕೆಯ ಜೀವಕ್ಕೆ ಅಪಾಯ ಒದಗುವ ಸಾಧ್ಯತೆ ಇದೆ ಎಂದು ಹೇಳಿದ್ದರು.
ಗರ್ಭಪಾತ ಕಾಯಿದೆಯ ಪ್ರಕಾರ ಮಹಿಳೆಯು ಗರ್ಭ ಧರಿಸಿ 20 ವಾರ ಕಳೆದರೆ ಆಕೆಗೆ ಗರ್ಭಪಾತ ಮಾಡಿಕೊಳ್ಳುವುದಕ್ಕೆ ಕಾನೂನಿನ ಪ್ರಕಾರ ಅವಕಾಶ ಇರುವುದಿಲ್ಲ. ಈ ಕಾರಣದಿಂದ ಗರ್ಭಪಾತ ಮಾಡಿಸಿಕೊಳ್ಳಲು ಕಾನೂನು ಅಡಚಣೆ ಹೊಂದಿದ್ದ ರೇಪ್ ಸಂತ್ರಸ್ತೆಯು ತನ್ನೊಳಗಿನ ಭ್ರೂಣವು ಅಸಹಜ ಸ್ಥಿತಿಯಲ್ಲಿರುವುದರಿಂದ ತನಗೆ ಗರ್ಭಪಾತ ಮಾಡಿಸಿಕೊಳ್ಳುವುದಕ್ಕೆ ಅವಕಾಶ ನೀಡಬೇಕೆಂದು ಕೋರಿ ಸುಪ್ರೀಂ ಕೋರ್ಟ್ ಮೊರೆ ಹೋಗಿದ್ದಳು.