ದೇಶ

ನೀತಾ ಆಂಬಾನಿಗೆ "ವಿವಿಐಪಿ ಭದ್ರತೆ" ಒದಗಿಸಿದ ಕೇಂದ್ರ ಸರ್ಕಾರ

Srinivasamurthy VN

ಮುಂಬೈ: ರಿಲಯನ್ಸ್ ಸಂಸ್ಥೆ ಮುಖ್ಯಸ್ಥ ಮುಖೇಶ್ ಅಂಬಾನಿ ಅವರಿಗೆ ಜೆಡ್ ಕೆಟಗರಿ ಭದ್ರತೆ ಒದಗಿಸಿದ ವಿಚಾರ ಹಸಿರಾಗಿರುವಂತೆಯೇ ಅವರ ಪತ್ನಿ ನೀತಾ ಅಂಬಾನಿ ಅವರಿಗೂ ಕೂಡ ಕೇಂದ್ರ  ಸರ್ಕಾರ ವಿವಿಐಪಿ ಭದ್ರತೆ ಒದಗಿಸಿದೆ.

ಮೂಲಗಳ ಪ್ರಕಾರ ರಿಲಯನ್ಸ್ ಸಂಸ್ಥೆ ಮುಖ್ಯಸ್ಥ ಮುಖೇಶ್ ಅಂಬಾನಿ ಅವರ ಧರ್ಮಪತ್ನಿಯಾಗಿರುವ ನೀತಾ ಅಂಬಾನಿ ಅವರಿಗೆ ಕುಖ್ಯಾತ ಉಗ್ರಗಾಮಿ ಸಂಘಟನೆ ಇಂಡಿಯನ್ ಮುಜಾಹಿದ್ದೀನ್  ನಿಂದ ಜೀವ ಬೆದರಿಕೆ ಇದೆ ಎಂಬ ಗುಪ್ತಚರ ಇಲಾಖೆ ವರದಿ ನೀಡಿರುವ ಹಿನ್ನಲೆಯಲ್ಲಿ ಭದ್ರತೆ ಒದಗಿಸಲಾಗಿದೆ ಎಂದು ತಿಳಿದುಬಂದಿದೆ. ಹೀಗಾಗಿ ಕೇಂದ್ರ ಗೃಹ ಇಲಾಖೆ ವತಿಯಿಂದ ನೀತಾ  ಆಂಬಾನಿ ಅವರಿಗೆ ಒಂದು ಎಸ್ಕಾರ್ಟ್ ವಾಹನ ಸಮೇತ 10 ಮಂದಿ ಸಿಆರ್ ಪಿಎಫ್ ಯೋಧರ ಭದ್ರತೆ ಹೊಂದಿರುವ "ವೈ ಕೆಟಗರಿ ಭದ್ರತೆ" ಒದಗಿಸಲಾಗಿದೆ.

ಈ ಹಿಂದೆ ಇದೇ ಇಂಡಿಯನ್ ಮುಜಾಹಿದ್ದೀನ್ ಉಗ್ರ ಸಂಘಟನೆಯಿಂದ ಮುಖೇಶ್ ಅಂಬಾನಿ ಅವರಿಗೆ ಜೀವಬೆದರಿಕೆ ಇರುವ ಕುರಿತು ಮಾಹಿತಿ ಬಂದ ಹಿನ್ನಲೆಯಲ್ಲಿ ಅವರಿಗೆ ಜೆಡ್ ಕೆಟಗರಿ  ಶ್ರೇಣಿಯ ಭದ್ರತೆ ಒದಗಿಸಲಾಗಿತ್ತು. ಇದಕ್ಕಾಗಿ ಪ್ರತೀ ತಿಂಗಳು ಮುಖೇಶ್ ಅಂಬಾನಿ ಅವರು ಕೇಂದ್ರ ಸರ್ಕಾರಕ್ಕೆ (ಸಿಆರ್ ಪಿಎಫ್ ಗೆ) ಸುಮಾರು 15 ಲಕ್ಷ ಪಾವತಿ ಮಾಡುತ್ತಿದ್ದು, ಸುಮಾರು 15  ಮಂದಿ ಶಸ್ತ್ರಸಜ್ಜಿತ ಸಿಆರ್ ಪಿಎಫ್ ಯೋಧರನ್ನೊಳಗೊಂಡ ಎಸ್ಕಾರ್ಟ್ ವಾಹನ ಅವರಿಗೆ ಭದ್ರತೆ ನೀಡುತ್ತಿದೆ.

ಐಪಿಎಲ್ ನಲ್ಲಿ ಮುಂಬೈ ಇಂಡಿಯನ್ಸ್ ತಂಡ ಸಹ ಮಾಲಕಿ ಕೂಡ ಆಗಿರುವ ನೀತಾ ಅಂಬಾನಿ ತಂಡದ ಪ್ರಮುಖ ಬ್ರಾಂಡ್ ಅಂಬಾಸಿಡರ್ ಆಗಿದ್ದರು. ರಿಲಯನ್ಸ್ ಫೌಂಡೇಷನ್ಸ್ ಸಂಸ್ಥೆಯ  ಸಂಸ್ಥಾಪಕ ಅಧ್ಯಕ್ಷೆ ಕೂಡ ಆಗಿರುವ ನೀತಾ ಅವರು ಇತ್ತೀಚೆಗಷ್ಟೇ ಅಂತಾರಾಷ್ಟ್ರೀಯ ಒಲಿಂಪಿಕ್ಸ್ ಸಮಿತಿಯ ಸದಸ್ಯತ್ವಕ್ಕೆ ನಾಮನಿರ್ದೇಶನಗೊಂಡಿದ್ದರು. ಆ ಮೂಲಕ ಐಒಸಿ ಸದಸ್ಯತ್ವಕ್ಕ  ನಾಮನಿರ್ದೇಶನವಾದ ಮೊದಲ ಭಾರತೀಯ ಮಹಿಳೆ ಎಂಬ ಖ್ಯಾತಿಗೆ ನೀತಾ ಅಂಬಾನಿ ಪಾತ್ರವಾಗಿದ್ದರು.

SCROLL FOR NEXT