ದೇಶ

ಮಹಾದಾಯಿ ತೀರ್ಪಿನಲ್ಲಿ ಕರ್ನಾಟಕದ ಅರ್ಜಿ ತಿರಸ್ಕಾರ, ರಾಜ್ಯಕ್ಕೆ ಹಿನ್ನಡೆ

Srinivas Rao BV

ನವದೆಹಲಿ: ಮಹಾದಾಯಿ ನೀರು ವಿವಾದಕ್ಕೆ ಸಂಬಂಧಿಸಿದಂತೆ ಕರ್ನಾಟಕ ಸಲ್ಲಿಸಿದ್ದ ಮಧ್ಯಾಂತರ ಅರ್ಜಿಯ ತೀರ್ಪು ಪ್ರಕಟಗೊಂಡಿದ್ದು, ಮಹಾದಾಯಿ ನ್ಯಾಯಾಧಿಕರಣ ಕರ್ನಾಟಕದ ಅರ್ಜಿಯನ್ನು ತಿರಸ್ಕರಿಸಿದೆ.

ಅರ್ಜಿಯ ವಿಚಾರಣೆಯನ್ನು ಪೂರ್ಣಗೊಳಿಸಿರುವ ನ್ಯಾ. ಜೆಎಂ ಪಾಂಚಾಲ್ ಅಧ್ಯಕ್ಷತೆಯ ನ್ಯಾಯಾಧಿಕರಣ ಕರ್ನಾಟಕದ ಅರ್ಜಿಯನ್ನು ತಿರಸ್ಕರಿಸಿದ್ದು,  7.65 ಟಿಎಂಸಿ ಅಡಿ ನೀರು ಬಳಕೆಗೆ ಅನುಮತಿ ನೀಡಲು ಸಾಧ್ಯವಿಲ್ಲ ಎಂದು ಹೇಳಿದೆ. ನ್ಯಾಯಾಧಿಕರಣದ ತೀರ್ಪಿನಿಂದ ಕರ್ನಾಟಕಕ್ಕೆ ಹಿನ್ನಡೆಯುಂಟಾಗಿದೆ.

ಗೋವಾ ಮತ್ತು ಕರ್ನಾಟಕದ ಪರ ವಕೀಲರು ಸೋಮವಾರ ಮಂಡಿಸಿದ ವಾದ ಆಲಿಸಿದ ಜೆ.ಎಂ. ಪಾಂಚಾಲ್‌ ನೇತೃತ್ವದ ತ್ರಿಸದಸ್ಯ ಪೀಠವು, ತೀರ್ಪನ್ನು ಜು.27 ಕ್ಕೆ ಕಾಯ್ದಿರಿಸಿತ್ತು. ಮಹಾದಾಯಿ ನೀರು ಹಂಚಿಕೆಗೆ ವಿರೋಧ ವ್ಯಕ್ತಪಡಿಸಿರುವ ಗೋವಾ, ನದಿ ತಿರುವು ಯೋಜನೆಗೆ ಕರ್ನಾಟಕಕ್ಕೆ ಅವಕಾಶ ನೀಡಬಾರದು ಎಂಬ ವಾದವನ್ನು ಮತ್ತೆ ಮಂಡಿಸಿತು.

ಮಲಪ್ರಭಾ ನದಿಯು ಕೃಷ್ಣಾ ಕಣಿವೆ ವ್ಯಾಪ್ತಿಗೆ ಸೇರಿದ್ದು  ನದಿಗೆ ನಿರ್ಮಿಸಿರುವ ಜಲಾಶಯಕ್ಕಾಗಿ ಕರ್ನಾಟಕವು  ಮಹಾದಾಯಿ ಕಣಿವೆಯ ನೀರಿಗೆ ಬೇಡಿಕೆ ಸಲ್ಲಿಸಿರುವುದು  ಸರಿಯಲ್ಲ ಎಂಬುದು ಗೋವಾ ವಾದವಾಗಿದೆ.

ಮಹದಾಯಿ ನ್ಯಾಯಾಧಿಕರಣ ತೀರ್ಪಿನ ಬಗ್ಗೆ ಪ್ರತಿಕ್ರಿಯೆ ನೀಡಿರುವ ಜಲಸಂಪನ್ಮೂಲ ಸಚಿವ ಎಂ.ಬಿ ಪಾಟೀಲ್, ರಾಜ್ಯದ ಹಿತ ಕಾಪಾಡಲು ಮುಂದಿನ ಕ್ರಮ ಕೈಗೊಳ್ಳುತ್ತೇವೆ ಎಂದು, ಇನ್ನು ನನಗೆ ತೀರ್ಪಿನ ಅಂಶ ಏನಿದೆ ಎಂಬ ಬಗ್ಗೆ ಮಾಹಿತಿ ಇಲ್ಲ. ಈ ಬಗ್ಗೆ ಸರ್ಕಾರಿ ವಕೀಲರು ಹೆಚ್ಚಿನ ಮಾಹಿತಿ ನೀಡಲಿದ್ದಾರೆ.  ನೆಲ ಜಲ ಭಾಷೆ ವಿಚಾರದಲ್ಲಿ ಪಕ್ಷಾತೀತವಾಗಿ ಹೋರಾಡುತ್ತೇವೆ, ಸರ್ವಪಕ್ಷ ಸಭೆ ಕರೆದು ಮುಂದಿನ ಕ್ರಮ ಕೈಗೊಳ್ಳುವ ಬಗ್ಗೆ ಅಂತಿಮ ನಿರ್ಧಾರ ಕೈಗೊಳ್ಳಲಾಗುವುದು ಎಂದು ಎಂ.ಬಿ ಪಾಟೀಲ್ ತಿಳಿಸಿದ್ದಾರೆ.

SCROLL FOR NEXT