ಮುಂಬೈ: ಮಹಾರಾಷ್ಟ್ರದಲ್ಲಿ ಕಣ್ಮರೆಯಾಗಿರುವ ನೂರಕ್ಕೂ ಹೆಚ್ಚು ಮುಸ್ಲಿಂ ಯುವಕರು ಇಸೀಸ್ ಉಗ್ರ ಸಂಘಟನೆಗೆ ಸೇರ್ಪಡೆಯಾಗಿದ್ದಾರೆ ಎಂದು ಶಿವಸೇನೆ ಆರೋಪಿಸಿದೆ.
ವಿಧಾನಸಭೆಯಲ್ಲಿ ಶಿವಸೇನೆ ಈ ಕುರಿತು ಮಾಹಿತಿ ನೀಡಿದ್ದು, ಮರಾಠವಾಡ ಪ್ರದೇಶದಿಂದ ಸುಮಾರು ನೂರಕ್ಕೂ ಹೆಚ್ಚು ಮುಸ್ಲಿಂ ಯುವಕರು ಇಸೀಸ್ ಉಗ್ರ ಸಂಘಟನೆ ಸೇರಿದ್ದಾರೆ ಎಂದು ಶಿವಸೇನೆ ಶಾಸಕ ರಘು ಪಾಟೀಲ್ ಹೇಳಿದ್ದಾರೆ. ಮುಸ್ಲಿಂ ಯುವಕರು ಇಸೀಸ್ ಉಗ್ರ ಸಂಘಟನೆಗೆ ಸೇರಿದ್ದಾರೆ ಎಂದು ಹೇಳಿರುವ ರಘು ಪಾಟೀಲ್, ಅಸಾವುದ್ದೀನ್ ಓವೈಸಿ ನೇತೃತ್ವದ ಎಂಐಎಂ ಪಕ್ಷ ಇಸೀಸ್ ಉಗ್ರ ಸಂಘಟನೆಯನ್ನು ಬೆಂಬಲಿಸುತ್ತಿದೆ ಎಂದು ಆರೋಪಿಸಿದ್ದು, ಪಕ್ಷದ ಮಾನ್ಯತೆಯನ್ನು ರದ್ದುಗೊಳಿಸಬೇಕೆಂದು ಒತ್ತಾಯಿಸಿದ್ದಾರೆ.
ತಮ್ಮ ಹೇಳಿಕೆಯನ್ನು ಸಮರ್ಥಿಸಿಕೊಳ್ಳುವುದಕ್ಕೆ ಇತ್ತೀಚೆಗಷ್ಟೇ ಮರಾಠವಾಡದಿಂದ ಪೊಲೀಸರು ಯುವಕನೋರ್ವನನ್ನು ಇಸೀಸ್ ಉಗ್ರ ಸಂಘಟನೆಯೊಂದಿಗೆ ಸಂಪರ್ಕ ಹೊಂದಿರುವ ಆರೋಪದಡಿ ಬಂಧಿಸಿದ್ದ ಪ್ರಕರಣವನ್ನು ಉದಾಹರಣೆಯಾಗಿ ನೀಡಿದ್ದು, ಪೊಲೀಸರಿಗೂ ಸಹ ನಾಪತ್ತೆಯಾಗಿರುವ ಮುಸ್ಲಿಂ ಯುವಕರು ಇಸೀಸ್ ಉಗ್ರ ಸಂಘಟನೆಗೆ ಸೇರ್ಪಡೆಯಾಗಿರುವ ಬಗ್ಗೆ ಶಂಕೆ ಇದೆ ಎಂದು ಹೇಳಿದ್ದಾರೆ.